ಚಾಮರಾಜನಗರ: ತಂದೆಗೆ ಕೊರೊನಾ ಬಂದಿದ್ದು, ಗ್ರಾಮಸ್ಥರು ನನಗೆ ಕುಡಿಯುವ ನೀರು ತರಲು ಬಿಡುತ್ತಿಲ್ಲ. ಪಂಚಾಯಿತಿ ಅವರು ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಯುವಕನೊಬ್ಬ ಅಳಲು ತೋಡಿಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಓದಿ: COVID: ಕೊರೊನಾಕ್ಕೆ ಸಿಂಹಿಣಿಯೂ ಬಲಿ: 9 ಸಿಂಹಗಳಿಗೆ ಪಾಸಿಟಿವ್
ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮದ ಚಂದ್ರನಾಯಕ ಎಂಬಾತ ವಿಡಿಯೋ ಮಾಡಿರುವ ಯುವಕನಾಗಿದ್ದು, ತನ್ನ ತಂದೆಗೆ ಕಳೆದ 6 ದಿನಗಳ ಹಿಂದೆ ಕೊರೊನಾ ದೃಢಪಟ್ಟು ಹೋಂ ಐಸೋಲೇಷನ್ ನಲ್ಲಿದ್ದಾರೆ. ಮನೆಯಲ್ಲಿ ನೀರು ಖಾಲಿಯಾಗಿದ್ದು, ನೀರು ತರಲು ಹೋದರೆ ಜನರು ಬಿಡುತ್ತಿಲ್ಲ. ಗ್ರಾಪಂ ಸಿಬ್ಬಂದಿಯೂ ನೀರು ಪೂರೈಕೆ ಮಾಡಿಲ್ಲ, ವೈದ್ಯಕೀಯ ಸಿಬ್ಬಂದಿ ಮನೆಯತ್ತ ಬಂದಿಲ್ಲ ಎಂದು ಅಳಲು ತೋಡಿಕೊಂಡು ವಿಡಿಯೋ ಹರಿಬಿಟ್ಟಿದ್ದಾನೆ.
ತಮಗೆ ಬಂದ ಸ್ಥಿತಿ ಯಾರಿಗೂ ಬರುವುದು ಬೇಡ, ನೀರು ಕುಡಿಯಲಾಗದ ಸ್ಥಿತಿಗೆ ಬಂದಿದ್ದೇವೆ ಎಂದು ಚಂದ್ರನಾಯಕ ವಿಡಿಯೋದಲ್ಲಿ ಹೇಳಿದ್ದಾನೆ. ಇನ್ನು, ಈ ಸಂಬಂಧ ಗ್ರಾಪಂ ಸಿಬ್ಬಂದಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆ ಸೋಂಕಿತರು ಮತ್ತು ಸೋಂಕಿತರ ಸಂಪರ್ಕಿತರು ಇದೇ ರೀತಿ ಖಿನ್ನರಾಗಿದ್ದು, ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕಿದೆ.