ಕೊಳ್ಳೇಗಾಲ(ಚಾಮರಾಜನಗರ): ತಾಲೂಕಿನ ಚಿಕ್ಕಲ್ಲೂರು (ಕೊತ್ತನೂರು) ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು(31) ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ.
ಮೇ.8 ರಂದು ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ.10 ರಂದು ಮೈಸೂರಿನ ಜಯದೇವ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿತ್ತು. ಆದ್ರೆ, ದುರದೃಷ್ಟವಶಾತ್ ಮಂಗಳವಾರ ಅಸುನೀಗಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮವಾದ ಇಕ್ಕಡಹಳ್ಳಿಯ ಜಮೀನೊಂದರಲ್ಲಿ ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಯಿತು.
ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ, ಮೂರು ತಿಂಗಳಿನಿಂದ ಗ್ರಾ.ಪಂ ಅಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ, ಐದು ವರ್ಷದ ಮಗು ಇದ್ದು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಜನರು ಈ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ.