ಚಾಮರಾಜನಗರ : ಯುದ್ಧಪೀಡಿತ ಉಕ್ರೇನ್ನಲ್ಲಿ ರಾಜ್ಯದ 281 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಸದ್ಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಗಳಲ್ಲಿದ್ದರೂ, ಯಾವಾಗ ಏನಾಗುತ್ತೋ ಎನ್ನುವ ಭೀತಿಯಲ್ಲೇ ಇದ್ದಾರೆ. ಇತ್ತ ಪೋಷಕರು ಸಹ ಆತಂಕಕ್ಕೊಳಗಾಗಿದ್ದಾರೆ. ಚಾಮರಾಜನಗರದ ವಿದ್ಯಾರ್ಥಿನಿ ಕಾವ್ಯ ಎನ್ನುವರು ವಿಡಿಯೋ ಸಂದೇಶ ಕಳುಹಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇಲ್ಲಿನ (ಉಕ್ರೇನ್) ಪರಿಸ್ಥಿತಿ ಹದಗೆಡುತ್ತಿದೆ. ನಮ್ಮನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಕಳೆದೆರಡು ದಿನದಿಂದ ಮೆಟ್ರೋ ಸ್ಟೇಷನ್ನಲ್ಲಿದ್ದೇವೆ.
ಇಲ್ಲಿ ಬಾಂಬ್ ಪ್ರೊಟೆಕ್ಟರ್ ಇರುವ ಹಿನ್ನೆಲೆ ಇದು ಸುರಕ್ಷಿತ ಎಂದು ಇಲ್ಲೇ ಇದ್ದೇವೆ. ಸದ್ಯ ನಮಗೆ ನೀರು ಸಿಗುತ್ತಿಲ್ಲ ಎಂದು ಪರಿಸ್ಥಿತಿ ಬಿಗಡಾಯಿಸಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಅಮ್ಮಾ.. ಹಾಸ್ಟೆಲ್ ದೂರದಲ್ಲಿ ಬಾಂಬ್ ಸ್ಫೋಟಗೊಂಡಿದೆ : ಉಕ್ರೇನ್ನಲ್ಲಿ ಸಿಲುಕಿದ ವಿದ್ಯಾರ್ಥಿನಿಯ ಅಳಲು..
ಯುದ್ದ ಘೋಷಣೆ ಮುನ್ನವೇ ಮಾಹಿತಿ ಕೊಟ್ಟಿದ್ದರು. ದಿನಸಿ ಪದಾರ್ಥ ಶೇಖರಿಸಿಕೊಳ್ಳಿ ಎಂದು ಉಕ್ರೇನ್ ಆಡಳಿತ ತಿಳಿಸಿದ್ದರಿಂದ ಸದ್ಯ ಎಲ್ಲವನ್ನೂ ಶೇಖರಣೆ ಮಾಡಿದ್ದೇವೆ.
ರಷ್ಯಾದವರು ಉಕ್ರೇನ್ ಏರ್ ಸ್ಪೇಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ವಿಮಾನ ನಿಲ್ದಾಣಗಳೆಲ್ಲವೂ ರಷ್ಯಾದವರ ಹಿಡಿತದಲ್ಲಿವೆ. ಹಾಗಾಗಿ, ಭಾರತ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕಿದೆ ಎಂದು ಅವರು ಕೋರಿದ್ದಾರೆ.