ಚಾಮರಾಜನಗರ: ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರನ ಪತ್ನಿಯನ್ನು ಕೊಳ್ಳೇಗಾಲ ಅಪರಾಧ ಪತ್ತೆ ವಿಭಾಗ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಸ್ಟೆಲ್ಲಾ ಅಲಿಯಾಸ್ ಸ್ಟೆಲ್ಲಾಮೇರಿ ಬಂಧಿತ ಆರೋಪಿ. ಪಾಲಾರ್ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊತ್ತೊಯ್ದ ಆರೋಪ ಈಕೆ ಮೇಲಿದೆ. ಈಕೆ ವೀರಪ್ಪನ್ ಗುಂಪಿಗೆ ಬಲವಂತವಾಗಿ ಸೇರಿಕೊಂಡಾಗ 13 ರ ಬಾಲಕಿಯಾಗಿದ್ದಳು ಎಂದು ಮೂಲಗಳು ತಿಳಿಸಿವೆ.
ಕಾಡುಗಳ್ಳ ವೀರಪ್ಪನ್ ಹುದುಗಿಸಿಟ್ಟಿದ್ದ ಹಣವನ್ನು ಸ್ಟೆಲ್ಲಾಳ ಭಾವ ಶೇಷರಾಜ್ ಲಪಟಾಯಿಸಿದ್ದನಂತೆ. ಈ ವಿಚಾರ ತಿಳಿದ ವೀರಪ್ಪನ್, ಶೇಷರಾಜ್ ಸೇರಿದಂತೆ ಸ್ಟೆಲ್ಲಾಳನ್ನು ಅಪಹರಿಸಿ ತನ್ನ ಹಣ ಕೊಡುವಂತೆ ತಾಕೀತು ಮಾಡಿದ್ದ. ಇದಕ್ಕೆ ಶೇಷರಾಜ್ ಕೂಡ ಒಪ್ಪಿದ್ದ. ಆ ವೇಳೆ, ವೀರಪ್ಪನ್ ಸಹಚರನಾದ ಸುಂಡ ಅಲಿಯಾಸ್ ವೆಲ್ಲೆಯನ್ ಸ್ಟೆಲ್ಲಾ ಮೇಲೆ ಮೋಹಗೊಂಡು ಬಲವಂತವಾಗಿ ವಿವಾಹ ಮಾಡಿಕೊಂಡಿದ್ದ.
ಒಂದೂವರೆ ವರ್ಷ ವೀರಪ್ಪನ್ ತಂಡದಲ್ಲೇ ಇದ್ದ ಸ್ಟೆಲ್ಲಾ, ಪಾಲಾರ್ ಬಾಂಬ್ ಸ್ಫೋಟ, ರಾಮಾಪುರ ಠಾಣೆಗೆ ಬೆಂಕಿ, ಶಸ್ತ್ರಾಸ್ತ್ರ ಹೊತ್ತೊಯ್ದ ಪ್ರಕರಣದ ಆರೋಪ ಹೊತ್ತಿದ್ದು, ಟಾಡಾ ಪ್ರಕರಣ ದಾಖಲಾಗಿದೆ.
ಕಾಡಾನೆ ದಾಳಿ ಕೊಟ್ಟ ಸುಳಿವು:
ಪತಿ ಸುಂಡ ಅನಾರೋಗ್ಯದಿಂದ ಮೃತಪಟ್ಟಿದ್ದರಿಂದ ಕೊಳ್ಳೇಗಾಲ ತಾಲೂಕಿನ ಜಾಗೇರಿಯ ಚೆನ್ನಿಪುರದದೊಡ್ಡಿಯ ವೇಲುಸ್ವಾಮಿ ಎಂಬಾತನೊಂದಿಗೆ ಎರಡನೇ ವಿವಾಹ ಮಾಡಿಕೊಂಡಿದ್ದ ಈಕೆ ಗುತ್ತಿಗೆ ಆಧಾರದ ಮೇಲೆ 6 ಎಕರೆಯಲ್ಲಿ ಕಬ್ಬು ಬೆಳೆದಿದ್ದಳು. ಕಳೆದ, 4 ದಿನಗಳ ಹಿಂದೆ ಕಾಡಾನೆಗಳ ಹಿಂಡು ಇವರ ಜಮೀನಿಗೆ ಲಗ್ಗೆ ಇಟ್ಟ ವೇಳೆ, ಅರಣ್ಯ ಇಲಾಖೆ ಸಿಬ್ಬಂದಿ ಆನೆ ಬೆದರಿಸಲು ಫೈರ್ ಮಾಡಿದ್ದಾರೆ. ಫೈರ್ ಮಾಡಿದ ಹಿನ್ನೆಲೆ ಇವರ ಜಮೀನಿಗೆ ಬೆಂಕಿ ಬಿದ್ದಿತ್ತು. ಈ ಕಾರಣದಿಂದಾಗಿ ಈಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು.
ಡಿವೈಎಸ್ಪಿ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿಯಾದ ಗೋವಿಂದರಾಜು, ವೆಂಕಟೇಶ್, ದೊರೆಸ್ವಾಮಿ ಹಾಗೂ ವಸಂತಾ ಎಂಬವರು ಆರೋಪಿಯನ್ನು ಬಂಧಿಸಿ ಚಾಮರಾಜನಗರ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಒಂದೂವರೆ ವರ್ಷ ಕಾಡುಗಳ್ಳನ ಜೊತೆಯಲ್ಲಿದ್ದ ಸ್ಟೆಲ್ಲಾ, ವಿಚಾರಣೆ ವೇಳೆ ವೀರಪ್ಪನ್ ಮಹಿಳೆಯರನ್ನು ನಂಬುತ್ತಲೇ ಇರಲಿಲ್ಲ, ಯಾವುದೇ ಕಾರ್ಯ ನಿಯೋಜಿಸಬೇಕಿದ್ದರೂ ಎರಡು ಮೂರು ಬಾರಿ ಯೋಚಿಸುತ್ತಿದ್ದ ಎಂದು ಹೇಳಿದ್ದಾಳೆ ಎಂದು ಮೂಲಗಳು ತಿಳಿಸಿವೆ.