ಚಾಮರಾಜನಗರ: ಜನರ ಬದುಕನ್ನು ಮೂರಾಬಟ್ಟೆ ಮಾಡುವ ಲಾಕ್ಡೌನ್ ಅನ್ನು ಏನಾದರೂ ಮತ್ತೆ ಜಾರಿ ಮಾಡಿದ್ದೇ ಆದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇನೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ನಗರದಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಡಾ. ಬಿ. ಆರ್ ಅಂಬೇಡ್ಕರ್ ಕ್ರೀಡಾಂಗಣ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ವಾರಾಂತ್ಯ ನಿರ್ಬಂಧದ ವಿರುದ್ಧ ಇಡೀ ರಾಜ್ಯದಲ್ಲಿ ಮಾತನಾಡಿದ ಮೊದಲಿಗ ನಾನು. ನಿತ್ಯ ಕೂಲಿ ಮಾಡುವವರು, ವ್ಯಾಪಾರ-ವಹಿವಾಟು ನಡೆಸುತ್ತಿರುವವರು ನಿರ್ಬಂಧಗಳಿಂದ ಜರ್ಜರಿತರಾಗಿದ್ದಾರೆ.
ವೀಕೆಂಡ್ ಕರ್ಫ್ಯೂ ಬೇಡವೇ ಬೇಡ. ಲಾಕ್ಡೌನ್ ಅಂತೂ ಮಾಡಲೇಬಾರದು. ಲಾಕ್ಡೌನ್ ಮಾಡಿದರೆ ಹೋರಾಟ ನಡೆಸುತ್ತೇನೆ. ಸಿಎಂ ಬೊಮ್ಮಾಯಿ ಅವರು ಪ್ರಾಮಾಣಿಕವಾಗಿ ಚಿಂತನೆ ನಡೆಸಿ ಜನರ ಜೀವನವನ್ನು ಗಮನದಲ್ಲಿಟ್ಟುಕೊಂಡು ವಾರಾಂತ್ಯದ ನಿರ್ಬಂಧವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು.
ಸಿಎಂ ಬದಲಾವಣೆ ಮೂರ್ಖತನ: ಸಿಎಂ ಬೊಮ್ಮಾಯಿ ಅವರ ಬದಲಾವಣೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಬೊಮ್ಮಾಯಿ ಅವರನ್ನು ಬದಲಾಯಿಸುವುದು ಮೂರ್ಖತನದ ಪರಮಾವಧಿ. ಆರು ತಿಂಗಳಿಗೂ ಸಿಎಂ ಅವರನ್ನು ಬದಲಿಸುತ್ತಾ ಹೋದರೆ ಆಡಳಿತ ನಡೆಸುವುದಾದರೂ ಹೇಗೆ?. ಬೊಮ್ಮಾಯಿ ಬಿಟ್ಟು ಅವರ ಪಕ್ಷದಲ್ಲಿ ನಾಯಕರು ಯಾರು ಇದ್ದಾರೆ ಎಂದು ಪ್ರಶ್ನಿಸಿದರು.
ಇದೇ ವೇಳೆ ನಗರದ ಅಂಬೇಡ್ಕರ್ ಕ್ರೀಡಾಂಗಣದ ದುಃಸ್ಥಿತಿ ಬಗ್ಗೆ ಮಾತನಾಡಿ, ಇನ್ನು 30 ಕೋಟಿ ರೂ. ನಷ್ಟು ಹಣ ಬೇಕಾಗಿದೆ. ಅದ್ಭುತವಾದ ಕ್ರೀಡಾಂಗಣ ಮಾಡಬೇಕಿದ್ದವರು ಹಾಳುಕೊಂಪೆ ಮಾಡಿದ್ದಾರೆ. ನಾನೇನಾದರೂ ಅಧಿಕಾರದಲ್ಲಿದ್ದರೆ ಇಲ್ಲಿ ರಣಜಿ ಟೆಸ್ಟನ್ನು ಆಯೋಜಿಸುತ್ತಿದ್ದೆ ಎಂದರು.
ಓದಿ: ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಮಹಾನಗರಗಳಲ್ಲೂ ಶಾಲೆಗಳ ಪುನಾರಂಭ: ಸಚಿವ ಬಿ.ಸಿ. ನಾಗೇಶ್