ಚಾಮರಾಜನಗರ: ಯುಪಿಪಿ ಪಕ್ಷ ಬುದ್ಧಿವಂತರಿಗೆ ಮಾತ್ರ ಎಂಬ ಅಡಿಬರಹವಿದೆ. ಆದರೆ, ನಮ್ಮ ಪಕ್ಷ ಬುದ್ಧಿವಂತರಿಗಿಂತ ಹೃದಯಯವಂತರಿಗೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಈ ದೇಶ ಬುದ್ಧಿವಂತರಿಂದಲೇ ಹಾಳಾಗಿದೆ. ದೇಶವನ್ನಾಳುವರು ತಮ್ಮ ಚಿಂತನೆಯೇ ಮಿಗಿಲು ಎಂದು ಭಾವಿಸುವುದರಿಂದ ಬೇರೆ ಬೇರೆ ನಾಯಕರು ಅವರದೇ ಆದ ಯೋಜನೆಯನ್ನು ಹೇರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಸೀಮಿತ ಪರಿಧಿಯಲ್ಲೇ ಎಲ್ಲರ ಆಲೋಚನೆ, ಚಿಂತನೆ ಸುತ್ತುತ್ತಿದ್ದು, ಯುಪಿಪಿ ವ್ಯವಸ್ಥೆಯ ಬದಲಾವಣೆಯಾಗಿದೆ. ಜನಸಾಮಾನ್ಯರ ಗೆಲುವೇ ಯುಪಿಪಿಯಾಗಿದೆ. ನಾನು ಈಗಾಗಲೇ ನನ್ನ ಕ್ಷೇತ್ರದಲ್ಲಿ ಗೆದ್ದಿದ್ದೇನೆ. ಚುನಾವಣೆ ಎಂದರೆ ಹಣ, ಹೆಂಡ, ಜಾತಿ ಎನ್ನುವಂತಾಗಿದೆ. ಈ ಪದ್ಧತಿ ಬದಲಾಗಬೇಕು. ಚುನಾವಣೆಯಲ್ಲಿ ಪ್ರಜೆಗಳು ಗೆಲ್ಲುವಂತಾಗಬೇಕು. ಜನರ ಬೇಡಿಕೆಗಳು ಪ್ರಣಾಳಿಕೆಯಾಗಬೇಕು. ಪ್ರಣಾಳಿಕೆಯನ್ನು ಜಾರಿಗೆ ತರಲಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯುವಂತಹ ಕಾನೂನನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಈಗ ರಾಜಕೀಯ ಎಂಬುದು ಬ್ಯುಸಿನೆಸ್ ಆಗಿದೆ. ರಾಜಕೀಯವೆಂಬುದು ಸಹ ಸಮಾಜ ಸೇವೆ ಎಂಬುದನ್ನೇ ಮರೆತಿದ್ದಾರೆ. ಇದು ಬದಲಾಗಬೇಕು. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ನಿಂತಿದ್ದು, ಅವರಿಗೆ ಸಪೋರ್ಟ್ ಮಾಡ್ತೀನಿ. ಆಟೋ ಗುರುತಿಗೆ ಎಲ್ಲರೂ ಮತ ಹಾಕಿದರೆ ಆಟೋಮ್ಯಾಟಿಕ್ಕಾಗಿ ಎಲ್ಲವೂ ಬದಲಾಗಲಿದೆ. ನನಗೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ, ಮತ್ತಿತರೆ ಕಾರ್ಯದಲ್ಲಿ ತೊಡಗಿರುವುದರಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದರು.
ಸುದ್ದಿಗೋಷ್ಠಿಗೂ ಮುನ್ನ ಯಳಂದೂರು, ಕೊಳ್ಳೇಗಾಲ, ಸಂತೇಮರಹಳ್ಳಿಯಲ್ಲಿ ಯುಪಿಪಿ ಅಭ್ಯರ್ಥಿ ಎಂ.ನಾಗರಾಜು ಪರ ಮತಯಾಚಿಸಿದರು.