ಚಾಮರಾಜನಗರ: ನವ ವಸಂತ್ಸರವನ್ನು ಹೊತ್ತು ತರುವ ಯುಗಾದಿ ಹಬ್ಬದ ಸಡಗರ ಜಿಲ್ಲಾದ್ಯಂತ ಮನೆ ಮಾಡಿದ್ದು, ಹಬ್ಬದಡುಗೆ, ದೇಗುಲ ಭೇಟಿ, ಚಿಣ್ಣರಿಗೆ ಹೊಸ ಬಟ್ಟೆಯ ಸಂಭ್ರಮ ಸಾಮಾನ್ಯ ದೃಶ್ಯವಾಗಿ ಕಂಡುಬಂದಿತು.
ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ತೇರು ಜಾತ್ರಾ ಮಹೋತ್ಸವ ನೆರವೇರಿತು. ತಮಿಳುನಾಡು ಭಾಗದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಈ ಜಾತ್ರೆಯಲ್ಲಿ ಭಾಗವಹಿಸುವುದರಿಂದ ತಮಿಳುನಾಡಿನ ತೇರು ಎನ್ನುವ ಪ್ರತೀತಿ ಇದೆ. ಅಂದಾಜು 2.5 ಲಕ್ಷ ಮಂದಿ ಭಕ್ತಾದಿಗಳು ಮಾದಪ್ಪನ ರಥೋತ್ಸವವನ್ನ ಕಣ್ತುಂಬಿಕೊಂಡು ಇಷ್ಟಾರ್ಥ ಬೇಡಿಕೆಗಾಗಿ ಪ್ರಾರ್ಥಿಸಿದರು.
ಯುಗಾದಿ ಹೊನ್ನೇರು:
ನವ ಸಂವತ್ಸರದ ಆರಂಭದ ದಿನ ರೈತರು ಅಲಂಕೃತ ಎತ್ತಿನ ಗಾಡಿಯಲ್ಲಿ ಗೊಬ್ಬರ ತುಂಬಿಕೊಂಡು ಜಮೀನುಗಳಿಗೆ ಹಾಕುವ ಮೂಲಕ ನವ ಸಂವತ್ಸರವಕ್ಕೆ ಸ್ವಾಗತ ಕೋರಿದರು. ಹೊಸ ವರ್ಷದ ಮೊದಲ ದಿನ ಎತ್ತಿನಗಾಡಿಗೆ ಪೂಜೆ ಮಾಡಿ, ಗ್ರಾಮಗಳಲ್ಲಿ ಮೆರವಣಿಗೆ ತೆರಳಿ, ಗೊಬ್ಬರ ಹಾಕುವ ಮೂಲಕ ಈ ವರ್ಷ ಮಳೆ-ಬೆಳೆ ಸಂಮೃದ್ಧಿಯಾಗಿರಲಿ ಎಂದು ರೈತರು ಪ್ರಾರ್ಥಿಸಿದರು.