ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಯುಗಾದಿ ಜಾತ್ರೆ ಆರಂಭಗೊಂಡಿದ್ದು, ಏ.2 ರವರೆಗೆ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕೊರೊನಾ ಕರಿಛಾಯೆಯಿಂದಾಗಿ ಕಳೆದ ಎರಡು ವರ್ಷವೂ ಸರಳ, ಸಾಂಪ್ರದಾಯಿಕವಾಗಿ ನಡೆದಿದ್ದ ಜಾತ್ರೆ ಈ ಬಾರಿ ವಿಜೃಂಭಣೆಯ ಕಳೆಗಟ್ಟಿದ್ದು, ಮೈಸೂರು ದಸರಾ ಮಾದರಿಯಲ್ಲಿ ದೇವಾಲಯ ಆವರಣ, ರಸ್ತೆಗಳು, ಮರಗಳಿಗೆ ದೀಪಾಲಂಕಾರ ಮಾಡಲಾಗಿದೆ. ಇಡೀ ಮಲೆಮಹದೇಶ್ವರ ಬೆಟ್ಟ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ.
ಇಂದು ದೇವರಿಗೆ ನಸುಕಿನ ಜಾವವೇ ವಿಶೇಷ ಪೂಜೆ ನಡೆಸುವ ಮೂಲಕ ಜಾತ್ರೆ ಆರಂಭಗೊಂಡಿದ್ದು, 30 ರಂದು ಎಣ್ಣೆ ಮಜ್ಜನ ಸೇವೆ, 31 ರಂದು ಮಲೆಮಹದೇಶ್ವರನಿಗೆ ವಿಶೇಷ ಅಲಾಂಕಾರ ಮತ್ತು ಸೇವೆಗಳು, ಏಪ್ರಿಲ್ 1 ರಂದು ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಮತ್ತು ಏ.2 ರಂದು ಬೆಳಗ್ಗೆ 7.30 ರಿಂದ 9ರ ನಡುವೆ ಮಹಾ ರಥೋತ್ಸವ ಜರುಗಲಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಬೇಸಿಗೆ ಕಾಲವಾದ್ದರಿಂದ ಭಕ್ತರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನಿರಂತರ ಅನ್ನ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿದ್ದು ಧಾರ್ಮಿಕ ಹಬ್ಬವಾಗಿ ಆಚರಿಸಬೇಕು ಎಂದು ಮುಜರಾಯಿ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ರಥೋತ್ಸವ ದಿನದಂದು ದೊಡ್ಡ ಮಟ್ಟದಲ್ಲಿ ಭಕ್ತರಿಗೆ ಬೇವು ಬೆಲ್ಲ ವಿತರಿಸಲು ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: ಹಿಮವದ್ ಗೋಪಾಲಸ್ವಾಮಿ ಜಾತ್ರೆ; ಇಲ್ಲಿ ಹಗ್ಗದಿಂದಲ್ಲ ಹಂಬಿನಿಂದ ರಥ ಎಳೆದ ಭಕ್ತರು!!
ಇನ್ನು, ಯುಗಾದಿ ಜಾತ್ರೆಗೆ ತಮಿಳುನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದು ತಾವು ಬೆಳೆದ ಬೆಳೆಯನ್ನು ದೇವರಿಗೆ ಅರ್ಪಿಸಲಿದ್ದಾರೆ.