ಚಾಮರಾಜನಗರ: ಸರ್ಕಾರಿ ಜಮೀನಿನಲ್ಲಿ ಮಣ್ಣು ತೆಗೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಬ್ಬರು ಗ್ರಾಮಲೆಕ್ಕಿಗರನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಮಾನತು ಮಾಡಿ ಆದೇಶಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಉಗನೀಯ ವೃತ್ತ ಗ್ರಾಮ ಲೆಕ್ಕಿಗ ಪದ್ಮ ಪ್ರಸೇನ್ ಸುಹಾಸ್ ಮತ್ತು ಧನಗೆರೆ ವೃತ್ತದ ಗ್ರಾಮ ಲೆಕ್ಕಿಗ ನಾಗೇಶ್.ಎಸ್ ಅಮಾನತುಗೊಂಡವರು. ಸರ್ಕಾರಿ ಸ್ವತ್ತಿನಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದರೂ ಇವರಿಬ್ಬರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.
ಅಕ್ರಮ ನಡೆದರೂ ಮೇಲಧಿಕಾರಿಗಳ ಗಮನಕ್ಕೆ ತಂದು ವರದಿ ಸಲ್ಲಿಸದೇ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.