ಚಾಮರಾಜನಗರ: ಬಾವಿಯೊಳಗೆ ಬಿದ್ದು ಒದ್ದಾಡಿದ ಹಾವುಗಳನ್ನು ಬರೋಬ್ಬರಿ 3 ತಾಸು ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿರುವ ಘಟನೆ ಯಳಂದೂರಿನಲ್ಲಿ ನಡೆದಿದೆ. ಯಳಂದೂರು ಪಟ್ಟಣದ ಬಳೆಪೇಟೆಯ ರಾಜು ಎಂಬವರ ಮನೆ ಸಮೀಪ ಇದ್ದ ಬಾವಿಯಲ್ಲಿ ಭಾರಿ ಗಾತ್ರದ ಎರಡು ವಿಷಪೂರಿತ ಮಂಡಲ ಹಾವುಗಳು ಬಿದ್ದ ವಿಚಾರ ಅರಿತ ಉರಗ ಪ್ರೇಮಿ ಸಂತೇಮರಹಳ್ಳಿಯ ಸ್ನೇಕ್ ಮಹೇಶ್ ಸ್ಥಳಕ್ಕೆ ತೆರಳಿ ಎರಡು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ.
ರಾತ್ರಿ ವೇಳೆಯಲ್ಲಿ ಬಾವಿಗೆ ಎರಡು ಹಾವುಗಳು ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು. ಸ್ನೇಕ್ ಮಹೇಶ್ 3 ತಾಸು ಕಾರ್ಯಾಚರಣೆ ಕೈಗೊಂಡು ಸುರಕ್ಷಿತವಾಗಿ ಮೇಲಕ್ಕೆತ್ತಿ ಹಾವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.
ವಿಷಪೂರಿತ ಮಂಡಲ ಹಾವುಗಳು: ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸ್ನೇಕ್ ಮಹೇಶ್, ಮಂಡಲ (Russell's viper) ಹಾವು ಭಾರತದ ಅತ್ಯಂತ ವಿಷಕಾರಿ ನಾಲ್ಕು ಹಾವುಗಳಲ್ಲಿ ಒಂದಾಗಿದೆ. ಭಾರತದಲ್ಲಿ ಹಾವು ಕಡಿತದಿಂದ ಮೃತಪಡುವ ಜನರಲ್ಲಿ ಹೆಚ್ಚಿನ ಜನ ಈ ಕೊಳಕು ಮಂಡಲದ ಜೊತೆಗೆ ನಾಗರಹಾವು, ಕಟ್ಟಾವು ಹಾಗೂ ಗರಸಗ ಮಂಡಲ ಎಂಬ ನಾಲ್ಕು ಹಾವುಗಳ ಕಡಿತದಿಂದ ಮಾತ್ರ ಸಾವನ್ನಪ್ಪುತ್ತಾರೆ. ವಿಷ ರಹಿತವಿರಲಿ ಅಥವಾ ವಿಷಕಾರಿ ಇರಲಿ, ಹಾವುಗಳು ಪರಿಸರದ ಸಮತೋಲನದಲ್ಲಿ ಇತರ ಜೀವಿಗಳಂತೆ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದ್ದಾರೆ. ನಾಗರ ಪಂಚಮಿ ಹಾಗೂ ಷಷ್ಠಿ ದಿನದಂದು ಯಾರೂ ಹುತ್ತಗಳಿಗೆ ಹಾಲು, ಹಣ್ಣು ಹಾಕಬೇಡಿ, ಹಾಲು, ಹಣ್ಣು ಹಾಕುವುದೇ ಹಾವುಗಳಿಗೆ ತೊಂದರೆ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿದ್ದ ಬುಸ್ ಬುಸ್ ನಾಗಪ್ಪ; ಹಾವು ಕಂಡು ಎದ್ನೋ ಬಿದ್ನೋ ಅಂತಾ ಓಡಿದ ವ್ಯಕ್ತಿ!