ಚಾಮರಾಜನಗರ: ಕಬ್ಬು ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ದಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯ ರಸ್ತೆಯ ದುರ್ಗಮ್ಮನ ದೇವಸ್ಥಾನದ ಬಳಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಗರಪುರ ಗ್ರಾಮದ ನಿವಾಸಿಗಳಾದ ಲಾರಿ ಕ್ಲೀನರ್ ಚಿನ್ನು ಮತ್ತು ಲಾರಿ ಚಾಲಕ ಹಾಗೂ ಮಾಲೀಕ ಪ್ರಕಾಶ್ ಮೃತರು.
ಗುಂಡಾಲ್ ಜಲಾಶಯ ಸಮೀಪದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಕಬ್ಬು ತುಂಬಿಕೊಂಡು ತೆರಳುವಾಗ ದುರ್ಗಮ್ಮನ ದೇವಸ್ಥಾನ ಹತ್ತಿರ ರಸ್ತೆ ಬದಿಯಲ್ಲಿ ಹಾದು ಹೋಗಿರುವ ಹೈ ಪವರ್ ವಿದ್ಯುತ್ ತಂತಿ ತಗುಲಿದೆ ಎನ್ನಲಾಗಿದೆ. ಈ ವೇಳೆ ಚಿನ್ನು ಹಾಗೂ ಪ್ರಕಾಶ್ ಲಾರಿಯಿಂದ ಹೊರಗಿಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾದರೂ ಪ್ರಯತ್ನ ವಿಫಲವಾಗಿದೆ. ಹೈ ಪವರ್ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರತ್ಯೇಕ ಪ್ರಕರಣ- ಪವರ್ ಹೈಟೆನ್ಷನ್ ಕಂಬದಲ್ಲಿ ಯುವಕನ ಶವ ಪತ್ತೆ: ಕೆಲಸಕ್ಕೆ ರಜೆ ಹಾಕಿ ಮೊಬೈಲ್ ರಿಪೇರಿ ಮಾಡಿಸಲು ನಗರಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಪವರ್ ಹೈಟೆನ್ಷನ್ ಕಂಬದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನೇನಹಳ್ಳಿ ಗ್ರಾಮದ ಹೊರಭಾಗದಲ್ಲಿ ನಡೆದಿದೆ. ಕಂಬದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಕೊನೇನಹಳ್ಳಿ ಗ್ರಾಮದ 25 ವರ್ಷದ ಅಮೃತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಈತ, ಮೊನ್ನೆ ಕೆಲಸಕ್ಕೆ ರಜೆ ಹಾಕಿದ್ದ. ಮನೆಯಲ್ಲಿ ಮೊಬೈಲ್ ರಿಪೇರಿ ಮಾಡಿಸಲು ದೊಡ್ಡಬಳ್ಳಾಪುರಕ್ಕೆ ಹೋಗಿ ಬರುವುದಾಗಿ ಹೇಳಿದ್ದ. ಹೀಗೆ ಹೋದವನು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ರಾತ್ರಿಯೆಲ್ಲಾ ಹುಡುಕಾಡಿದ ಕುಟುಂಬಸ್ಥರು ಬೆಳಗ್ಗೆ ಬರುತ್ತಾನೆಂದು ನಂಬಿ ಸುಮ್ಮನಾಗಿದ್ದಾರೆ. ನಿನ್ನೆ ಬೆಳಗ್ಗೆ 10 ಗಂಟೆ ವೇಳೆಗೆ ದನ ಕಾಯುವ ಹುಡುಗರು ವಿದ್ಯುತ್ ಕಂಬದಲ್ಲಿ ಯುವಕನ ಶವ ನೇತಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅಮೃತ್ ಎಂದು ತಿಳಿದುಬಂದಿದೆ. ಅಂದಹಾಗೆ, ಅಮೃತ್ ಸಾವು ಹಲವು ಸಂಶಯಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೊಬೈಲ್ ರಿಪೇರಿಗಾಗಿ ಹೋದ ಯುವಕ ವಿದ್ಯುತ್ ಕಂಬದಲ್ಲಿ ಶವವಾಗಿ ಪತ್ತೆ