ಚಾಮರಾಜನಗರ : ಕೊರೊನಾ ಸೋಂಕಿಗೆ ಇಂದು ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಪಿಎಫ್ಐ ಹಾಗೂ ಬಿಜೆಪಿ ಸ್ವಯಂ ಸೇವಕರು ಪ್ರತ್ಯೇಕವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಇಲ್ಲಿನ ಕೊಳ್ಳೇಗಾಲ ನಗರದ 58 ವರ್ಷದ ಸೋಂಕಿತೆ ಕೋವಿಡ್ ಆಸ್ಪತ್ರೆಗೆ ಕರೆತರುವಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರ ಅಂತ್ಯಸಂಸ್ಕಾರವನ್ನು ಗುಂಡ್ಲುಪೇಟೆ ರಸ್ತೆಯ ಖಬರ್ ಸ್ಥಾನದಲ್ಲಿ ಪಿಎಫ್ಐ ಕಾರ್ಯಕರ್ತರು ನೆರವೇರಿಸಿದ್ದಾರೆ. ಈವರೆಗೆ ಪಿಎಫ್ಐ ಜಿಲ್ಲೆಯಲ್ಲಿ 10 ಕೊರೊನಾ ಸೋಂಕಿತ ಶವಗಳಿಗೆ ಗೌರವಯುತ ಸಂಸ್ಕಾರ ನೆರವೇರಿಸಿದೆ.
ಮೃತದೇಹಕ್ಕೆ ಪೂಜೆ : ಕೊರೊನಾಗೆ ಬಲಿಯಾದ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ 55 ವರ್ಷದ ಮಹಿಳೆಯ ಅಂತ್ಯಸಂಸ್ಕಾರವನ್ನು ಬಿಜೆಪಿ ಕಾರ್ಯಕರ್ತರು ಹಿಂದೂ ಧಾರ್ಮಿಕ ವಿಧಿವಿಧಾನದಂತೆ ನೆರವೇರಿಸಿದರು. ಬಿಜೆಪಿ ಮುಖಂಡರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್ ಮತ್ತು ಇತರೆ 5 ಮಂದಿ ಕಾರ್ಯಕರ್ತರು ಶವಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲೆಯಲ್ಲಿ ಕೊರೊನಾಗೆ 11 ಜನರು ಬಲಿಯಾಗಿದ್ದಾರೆ.
ಮಾಹಿತಿ ಇಲ್ಲದ ಬುಲೆಟಿನ್ : ಪ್ರತಿದಿನ ಸಂಜೆ ಜಿಲ್ಲಾಡಳಿತ ಬಿಡುಗಡೆ ಮಾಡುತ್ತಿರುವ ಬುಲೆಟಿನ್ನಲ್ಲಿ ಸಾವಿನ ಲೆಕ್ಕವನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲದಂತೆ ಮಾಡಿದೆ. ಯಳಂದೂರು ತಾಲೂಕಿನ ಬಳೆಪೇಟೆ ನಿವಾಸಿಯ ಸಾವು, ಕೊಳ್ಳೇಗಾಲದ ಮುಸ್ಲಿಂ ಮಹಿಳೆಗೆ ಕೊರೊನಾ ಇರುವುದು ದೃಢಪಟ್ಟಿದ್ದರೂ ಮಾಹಿತಿ ನೀಡುವ ಗೋಜಿಗೆ ಆರೋಗ್ಯ ಇಲಾಖೆ ಹೋಗಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.