ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಲಾರಿ ಕೆಟ್ಟು ನಿಂತ ಕಾರಣ ಭಾರಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಯಿತು.
ಕೇರಳದ ಮಲಪ್ಪುರಂಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಮೇಲುಕಾಮನಹಳ್ಳಿ ಚೆಕ್ಪೋಸ್ಟ್ ಬಳಿಯ ತಿರುವಿನಲ್ಲಿ ಆ್ಯಕ್ಸೆಲ್ ತುಂಡಾದ ಕಾರಣ ರಸ್ತೆ ಮಧ್ಯೆ ನಿಂತು ಹೋಗಿತ್ತು. ಇದರಿಂದಾಗಿ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಚೆಕ್ಪೋಸ್ಟ್ನಲ್ಲಿ ವಾಹನಗಳನ್ನು ಬಿಟ್ಟರೆ ಕಾಡಿನ ಮಧ್ಯೆ ವಾಹನಗಳು ನಿಲ್ಲುತ್ತವೆ ಎಂದು ಸುಮಾರು ಎರಡು ಗಂಟೆಗಳ ಕಾಲ ಚೆಕ್ಪೋಸ್ಟ್ ಬಳಿ ಭಾರಿ ವಾಹನಗಳನ್ನು ತಡೆ ಹಿಡಿಯಲಾಗಿತ್ತು.
ಲಾರಿಗಳು ಸುಮಾರು ಒಂದು ಕಿಲೋಮೀಟರವರೆಗೆ ಸಾಲು ಗಟ್ಟಿ ನಿಂತಿದ್ದವು. ಬಳಿಕ ಮೆಕ್ಯಾನಿಕ್ ಬಂದು ವಾಹನ ಸರಿಪಡಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.