ಚಾಮರಾಜನಗರ: 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಇಂದು ಸಾರಿಗೆ ಸಂಸ್ಥೆಯ 50ಕ್ಕೂ ಹೆಚ್ಚು ಸಿಬ್ಬಂದಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೆಂಡತಿ - ಮಕ್ಕಳೊಂದಿಗೆ ಖಾಲಿ ತಟ್ಟೆ - ಲೋಟ ಹಿಡಿದು ಬಂದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೋರಾಟ ಹತ್ತಿಕ್ಕುವ ಬದಲು ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಿ. ಪರಿಹಾರ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ನೌಕರರ ಹೋರಾಟಕ್ಕೆ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು, ದಲಿತ ಪರ ಹೋರಾಟಗಾರರು ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಕಿಡಿಕಾರಿದರು.
100ಕ್ಕೂ ಹೆಚ್ಚು ಸಾರಿಗೆ ಸಂಸ್ಥೆ ಬಸ್ಗಳು ಇಂದು ಸಂಚಾರ ಆರಂಭಿಸಿದ್ದು, ಮಂಗಳವಾರದಿಂದ ಗ್ರಾಮಾಂತರ ವಿಭಾಗಕ್ಕೂ ಸೇವೆ ವಿಸ್ತರಣೆಯಾಗಲಿದೆ. ಈಗಾಗಲೇ 25 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಡಿಸಿ ಶ್ರೀನಿವಾಸ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.