ಚಾಮರಾಜನಗರ : ಕೊರೊನಾ ಸಾಂಕ್ರಾಮಿಕ ಅಬ್ಬರದ ಬಳಿಕ ಈಗ ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಪ್ರವಾಸ ಚಟುವಟಿಕೆಗಳು ಗರಿಗೆದರುತ್ತಿವೆ. ಪ್ರವಾಸಿಗರನ್ನೇ ಅವಲಂಭಿಸಿದ್ದ ಕುಟುಂಬಗಳು ಈಗ ತುಸು ಆರ್ಥಿಕ ಚೇತರಿಕೆ ಕಾಣುತ್ತಿವೆ.
ವಾರಾಂತ್ಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕೊರೊನಾ ಹಿನ್ನೆಲೆ ಖಾಲಿ ಖಾಲಿಯಾಗಿತ್ತು. ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆ ಚಾರಣ ಪ್ರಿಯರು ಮತ್ತೆ ಈಗ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅಲ್ಲಿನ ದಟ್ಟ ಮಂಜು, ಹಚ್ಚಹಸಿರನ್ನು ಕಣ್ತುಂಬಿಕೊಳ್ಳಲು ಬೆಂಗಳೂರು, ಮೈಸೂರು, ಮಂಡ್ಯದಿಂದ ತಂಡೋಪ ತಂಡವಾಗಿ ಬೆಟ್ಟಕ್ಕೆ ಕಾಲಿಡುತ್ತಿದ್ದರು. ಈಗ ಅದು ಮತ್ತೆ ಮರುಕಳಿಸುತ್ತಿದೆ.
ಲಾಕ್ಡೌನ್ಗೂ ಮುನ್ನ ಶನಿವಾರ ಮತ್ತು ಭಾನುವಾರ 4ರಿಂದ 5ಸಾವಿರ ಪ್ರವಾಸಿಗರು ಬರುತ್ತಿದ್ದರು. ಕೊರೊನಾ ಅನ್‌ಲಾಕ್ ಘೋಷಣೆಯಾದ ಬಳಿಕ 500-800ಕ್ಕೆ ಸೀಮಿತವಾಗಿತ್ತು. ಆದರೆ, ಕೆಲ ದಿನಗಳಿಂದ ಈಚೆಗೆ 2-3 ಸಾವಿರ ಪ್ರವಾಸಿಗರು ಬರುತ್ತಿದ್ದಾರೆ. ಇದು ಪ್ರವಾಸೋದ್ಯಮಕ್ಕೆ ಇಂಬು ನೀಡುತ್ತಿದೆ. ಬಂಡೀಪುರ ಸಫಾರಿಗೂ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಅನ್ಲಾಕ್ 2, 3ರಲ್ಲಿ 20ರಿಂದ 25 ಸಾವಿರ ಬರುತ್ತಿದ್ದ ಆದಾಯ ಈಗ 2 ಲಕ್ಷ ರೂಪಾಯಿ ದಾಟುತ್ತಿದೆ. ಇನ್ನೂ ಹುಲಿ, ಚಿರತೆ ಮತ್ತು ಕಾಡುಕೋಣಗಳು ಅಲ್ಲಲ್ಲಿ ಕಾಣ ಸಿಗುತ್ತಿದ್ದು, ಪ್ರಾಣಿಪ್ರಿಯರನ್ನು ಸಂತಸಗೊಳಿಸಿದೆ.
ಕೊಳ್ಳೇಗಾಲದ ಭರಚುಕ್ಕಿ ಜಲಪಾತವೂ ಜಿಲ್ಲೆಯ ಪ್ರಮುಖ ಪ್ರೇಕ್ಷಣಿಯ ಸ್ಥಳವಾಗಿದೆ. ಕಾವೇರಿ ಹೊರಹರಿವು ಹೆಚ್ಚಾದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ. ಇದರ ಜೊತೆಗೆ ಶಿವನಸಮುದ್ರ ಸಮೂಹ ದೇವಾಲಯಗಳು, ದರ್ಗಾಕ್ಕೂ ಭಕ್ತರು ಬರುತ್ತಿರುವುದು ಆರ್ಥಿಕತೆಗೆ ಹುರುಪು ನೀಡುತ್ತಿದೆ.
ಹಳಿಗೆ ಮರಳಿದ ಕೆಎಸ್ಆರ್ಟಿಸಿ ಆದಾಯ : ಅನ್‌ಲಾಕ್ ಬಳಿಕವೂ ನಷ್ಟದಲ್ಲೇ ನಡೆಯುತ್ತಿದ್ದ ಸಾರಿಗೆ ಸಂಸ್ಥೆ ಬಸ್ಗಳು ಈಗ ಕೊಂಚ ಚೇತರಿಕೆ ಕಾಣುತ್ತಿವೆ. ಸದ್ಯ ನಷ್ಟದ ಪ್ರಮಾಣ ಕೊಂಚ ತಗ್ಗಿದೆ. ಕಳೆದ ಮೂರು ತಿಂಗಳಿನಿಂದ ನಿತ್ಯ 12-14 ಲಕ್ಷಕ್ಕೆ ಇಳಿದಿದ್ದ ಆದಾಯ ಕಳೆದ 6 ದಿನಗಳಿಂದ 26 ಲಕ್ಷ ದಾಟುತ್ತಿದೆ. ಲಾಕ್ಡೌನ್ಗೂ ಮುನ್ನ ಸರಾಸರಿ ಆದಾಯ 50 ಲಕ್ಷ ದಾಟುತ್ತಿತ್ತು ಎಂದು ಕೆಎಸ್ಆರ್ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.