ಚಾಮರಾಜನಗರ: ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕೊಳ್ಳೇಗಾಲ ನಗರಸಭೆಯ 1 ವಾರ್ಡ್ ಹಾಗೂ 4 ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಗ್ರಾಪಂ ಹೊರತುಪಡಿಸಿ ಎಲ್ಲೆಡೆಯೂ ಇವಿಎಂ ಬಳಸಲಾಗುತ್ತಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಜಿಪಂ ಕ್ಷೇತ್ರ, ಯಳಂದೂರು ತಾಪಂ ಯರಿಯೂರು ಕ್ಷೇತ್ರ ಹಾಗೂ ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್, ಬಾಣೂರು, ಚಿಕ್ಕಮಾಲಾಪುರ ಕ್ಷೇತ್ರ, ಬಂಡೀಪುರ, ಹಸಗೂಲಿ ಕ್ಷೇತ್ರಗಳಿಗೆ ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ.
ಕೈ-ಕಮಲ ಪೈಟ್: ಹರದನಹಳ್ಳಿ ಜಿಪಂ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಮತ್ತು ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಹರದನಹಳ್ಳಿ ಜಿಪಂ ಕ್ಷೇತ್ರದಲ್ಲಿ ಉಪ್ಪಾರ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪುಟ್ಟರಂಗಶೆಟ್ಟಿ ಪರ ಸ್ವಜಾತಿ ಮತಗಳು ತಮಗೆ ಬರುವ ವಿಶ್ವಾಸವಿದೆ. ಒಂದು ವೇಳೆ ಕೈಕೊಟ್ಟರೇ ಬಿಜೆಪಿ ವಿಜಯಿಯಾಗಲಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆರ್.ಧೃವನಾರಾಯಣ್ ಅವರಿಗಿಂತ ಶ್ರೀನಿವಾಸ ಪ್ರಸಾದ್ ಹೆಚ್ಚು ಮತ ಪಡೆದಿದ್ದರು. ಇದೀಗ ಆ ಸೇಡು ತೀರಿಸಿಕೊಳ್ಳಲು ಧೃವನಾರಾಯಣ ಅವರು ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಜೊತೆಗೂಡಿ ಭಾರೀ ಕಸರತ್ತು ನಡೆಸಿದ್ದಾರೆ. ವೀರಶೈವರ ಮತ ಸೆಳೆಯಲು ಗುಂಡ್ಲುಪೇಟೆ ಕ್ಷೇತ್ರದ ಯುವನಾಯಕ ಎಚ್.ಎಂ.ಗಣೇಶ್ ಪ್ರಸಾದ್ ಮತ್ತು ನಾಯಕರ ಮತ ಸೆಳೆಯಲು ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಕರೆತಂದು ಪ್ರಚಾರ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಪರ ಸಂಸದ ವಿ.ಶೀನಿವಾಸ ಪ್ರಸಾದ್, ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಸಿ.ಗುರುಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಪ್ರಚಾರ ನಡೆಸಿದ್ದಾರೆ. ಹರದನಹಳ್ಳಿ ಜಿಪಂ ಕ್ಷೇತ್ರದಲ್ಲಿ ಒಟ್ಟು 38 ಮತಗಟ್ಟೆಗಳಿದ್ದು, 29,602 ಮತದಾರರಿದ್ದಾರೆ.