ಚಾಮರಾಜನಗರ: ವೀಕೆಂಡ್ ಬಂತೆಂದರೆ ಟೆಕ್ಕಿಗಳಿಗೆ, ಪಿಕ್ನಿಕ್ ಲಹರಿಯಲ್ಲಿರುವವರಿಗೆ ಬಂಡೀಪುರ ನೆನಪಾಗುವುದು ಸಾಮಾನ್ಯ. ಆದರೆ, ಸಫಾರಿಗೆ ಬಂದ ಪ್ರವಾಸಿಗರಿಗೆ ಹುಲಿ ದರ್ಶನ ಕಳೆದ 2-3 ತಿಂಗಳಿನಿಂದ ಅಪರೂಪವೇ ಆಗಿದ್ದನ್ನು ಈಗ ಇಲ್ಲಿನ ವ್ಯಾಘ್ರ ಸರಿದೂಗಿಸಿದ್ದಾನೆ.
ಹೌದು, ಸುಂದರಿ ಎಂದು ಕೆಲ ಛಾಯಾಚಿತ್ರಗಾರರು ಹೆಸರಿಟ್ಟಿರುವ ಹುಲಿಯೊಂದು ಯಾವುದೇ ಭಯ, ಅಳುಕಿಲ್ಲದೇ ಸಫಾರಿಗೆ ಬಂದ ಪ್ರವಾಸಿಗರಿಗೆ ದರ್ಶನ ನೀಡಿ ಪುಳಕಿತಗೊಳಿಸುತ್ತಿದ್ದು ಅಂದಿನ ಪ್ರಿನ್ಸ್ನ್ನು ಮತ್ತೆ ನೆನಪಿಸುತ್ತಿದ್ದಾನೆ.
ಸಾವಿರಾರು ರುಪಾಯಿ ಹಣ ತೆತ್ತು ಸಫಾರಿಗೆ ತೆರಳಿದರೂ ಕಳೆದ 3-4 ತಿಂಗಳಿನಿಂದ ಕೆಲವೊಮ್ಮೆ ಆನೆಯೂ ಸಿಗುತ್ತಿರಲಿಲ್ಲ. ಹುಲಿಯಂತೂ ಕಾಣುವುದು ದೂರದ ಮಾತೇ ಆಗಿತ್ತು. ಕಳೆದ 3 ದಿನಗಳಿಂದ ಬಾರ್ಡರ್ ಲೈನ್, ಬೋಳಗುಡ್ಡ, ಕೆಂಪನಕಟ್ಟೆ ಕ್ಯಾಂಪ್ ಬಳಿ ಹುಲಿ ಕಾಣಿಸಿಕೊಂಡು ಪ್ರವಾಸಿಗರಿಗೆ ಸಖತ್ ಮುದ ನೀಡುತ್ತಿದ್ದಾನೆ.
ಶುಕ್ರವಾರ ಬೆಳಗ್ಗೆ , ಶನಿವಾರ ಬೆಳಗ್ಗೆ- ಸಂಜೆ ಹಾಗೂ ಇಂದು ಸಂಜೆಯೂ ಕೂಡ ವ್ಯಾನ್ ಸೇರಿದಂತೆ 6-7 ವಾಹನಗಳಿಗೆ ದರ್ಶನ ನೀಡಿದ್ದು ಸಫಾರಿಪ್ರಿಯರಲ್ಲಿ ಸಂತಸ ಉಂಟು ಮಾಡಿದೆ.