ಚಾಮರಾಜನಗರ (ಗುಂಡ್ಲುಪೇಟೆ): ಇಲ್ಲಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಎರಡು ಹಸುಗಳು ಬಲಿಯಾಗಿವೆ. ತಾಲೂಕಿನ ಕಡಬೂರು ಗ್ರಾಮದ ರಾಜಪ್ಪ ಎಂಬುವರಿಗೆ ಸೇರಿದ ಎರಡು ಹಸುಗಳನ್ನು ಜಮೀನಿನ ಬಳಿ ಮೇಯಲು ಬಿಟ್ಟಿದ್ದಾಗ ಹುಲಿ ದಾಳಿ ಮಾಡಿದೆ. ಸ್ಥಳಕ್ಕೆ ಕುಂದುಕೆರೆ ವಲಯದ ವಲಯಾರಣ್ಯಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಭೇಟಿ ಮಾಡಿ ಮಹಜರು ಮಾಡಿ ಹುಲಿ ಸೆರೆಗೆ ಬೋನು ಅಳವಡಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಹುಲಿ ದಾಳಿಗೆ ರೈತರು ಹೈರಣಾಗಿದ್ದರು. ಹುಲಿ ಸೆರೆಯಾದ ಬಳಿಕ ಎಲ್ಲೂ ಹುಲಿ ಹಾವಳಿ ಕಂಡು ಬಂದಿರಲಿಲ್ಲ. ಮತ್ತೆ ಹುಲಿ ದಾಳಿಗೆ ಹಸುಗಳು ಬಲಿಯಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ಕೋವಿಡ್ ಸಮಸ್ಯೆಯಿಂದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಹೈನುಗಾರಿಕೆ ರೈತರ ಜೀವನೋಪಾಯವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಕಡಬೂರು ಮಂಜುನಾಥ್ ಒತ್ತಾಯಿಸಿದರು.