ಚಾಮರಾಜನಗರ: ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಆಘಾತಕಾರಿ ಆತ್ಮಹತ್ಯೆ ಯತ್ನ ಪ್ರಕರಣ ನಡೆದಿದ್ದು, ಭಕ್ತಾದಿಗಳು ಬೆಚ್ಚಿ ಬಿದ್ದಿರುವ ಘಟನೆ ಇಂದು ನಡೆದಿದೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ "'ನಾಗಮಲೆ" ಎಂಬಲ್ಲಿ ಬೆಂಗಳೂರಿನ ಕೆಂಗೇರಿಯ ಶ್ರೀನಿಧಿ ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ.
ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರೊಟ್ಟಿಗೆ ಸೇರಿಕೊಂಡ ಶ್ರೀನಿಧಿ ತನ್ನ ತಾಯಿಯೊಟ್ಟಿಗೆ ಮೊಬೈಲ್ ನಲ್ಲಿ ಮಾತನಾಡಿ, ಹರಕೆ ಘಂಟೆಯನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಿ ಹಿಂತಿರುಗುವಾಗ ಬಂಡೆಯೊಂದರ ಮೇಲೆ ಹತ್ತಿ ಜಿಗಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡಾತನನ್ನು ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಂಬಂಧಿಕರು ಬೇರೆಡೆಗೆ ಕರೆದೊಯ್ದಿದ್ದಾರೆ. ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಕೆರೆಗೆ ಬಿದ್ದು ಇಬ್ಬರು ಸಾವು: ಮದ್ಯದ ಅಮಲಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಕೆರೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಕೆರೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಕಾರ್ತಿಕ್(30) ಹಾಗೂ ವಿನೋದ್(24) ಮೃತರು. ಈ ಇಬ್ಬರು ವ್ಯಕ್ತಿಗಳು ಕೂಲಿ ಕಾರ್ಮಿಕರಾಗಿದ್ದು, ಭಾನುವಾರ ಆದ್ದರಿಂದ ಮದ್ಯಪಾನ ಮಾಡಿ ಕೆರೆ ಬಳಿ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ; ಪತ್ನಿ ತೊರೆದು ಪ್ರಿಯತಮೆ ಜೊತೆಗೆ ಬಂದಿದ್ದ ಯುವಕ ಆತ್ಮಹತ್ಯೆ