ಚಾಮರಾಜನಗರ: ಶಿಕ್ಷಕರೊಬ್ಬರಿಗೆ ಪೆಪ್ಪರ್ ಸ್ಪ್ರೇ ಹೊಡೆದು ಹಾಡಹಗಲೇ 2 ಲಕ್ಷ ರೂ. ದರೋಡೆ ಮಾಡಿರುವ ಘಟನೆ ನಗರದ ಭುವನೇಶ್ವರಿ ವೃತ್ತದ ಸಮೀಪ ನಡೆದಿದೆ.
ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಗರದ ಹೌಸಿಂಗ್ ಬೋರ್ಡ್ ನಿವಾಸಿ ಶಿವಕುಮಾರ್ ಮನೆ ಕಟ್ಟಿಸುವ ಸಲುವಾಗಿ ಇಟ್ಟಿದ್ದ ಒಂದು ಲಕ್ಷ ರೂ. ಹಣ ಮತ್ತು ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷ ರೂ. ಹೌಸಿಂಗ್ ಲೋನ್ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದರು. ತಾವು ತಂದಿದ್ದ ಬ್ಯಾಗ್ನಲ್ಲಿ 2 ಲಕ್ಷ ರೂ. ಹಾಕಿಕೊಂಡು ಬಸ್ಗಾಗಿ ಕಾಯುತ್ತಿದ್ದರು.
ಇದನ್ನು ಗಮನಿಸಿದ ಕಳ್ಳನೊಬ್ಬ ಬಸ್ಗಾಗಿ ಕಾಯುತ್ತಿದ್ದ ಶಿಕ್ಷಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾನೆ. ಕೂಡಲೇ ಶಿವಕುಮಾರ್ ಕಣ್ಣಿಗೆ ಉರಿ ಕಾಣಿಸಿಕೊಂಡಿದ್ದರಿಂದ ಬ್ಯಾಗ್ನ್ನು ಪಕ್ಕಕ್ಕಿಟ್ಟು ವಾಟರ್ ಬಾಟಲ್ ಮುಖವನ್ನು ತೊಳೆದುಕೊಳ್ಳುತ್ತಿದ್ದರು. ಈ ವೇಳೆ, ಕಳ್ಳ ಹಣವಿದ್ದ ಬ್ಯಾಗ್ವನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ.
ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಭುವನೇಶ್ವರಿ ವೃತ್ತದ ಆಸುಪಾಸಿನ ಮಳಿಗೆಗಳಲ್ಲಿರುವ ಸಿಸಿಟಿವಿಗಳನ್ನು ಪೊಲೀಸರು ಈಗ ಜಾಲಾಡುತ್ತಿದ್ದಾರೆ.