ಚಾಮರಾಜನಗರ : ಕೇಂದ್ರದ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾದ ಹಾಗೂ ಜನಪರ ಬಜೆಟ್ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಬಜೆಟ್ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಸಚಿವರು, ಕೊರೊನಾ ಸಂಕಷ್ಟ ಕಾಲವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ಮಂಡಿಸಿದೆ. ಯಾರಿಗೂ ಹೊರೆಯಾಗದಂತ ಬಜೆಟ್ ಇದಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಗೆ 48,000 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾರಿಗೊಳಿಸಲಾಗುತ್ತದೆ. ದೇಶದಲ್ಲಿ ವಸತಿ ಸೌಲಭ್ಯದ ಉನ್ನತೀಕರಣಕ್ಕೆ ಬಜೆಟ್ನಲ್ಲಿ ಮಹತ್ವ ನೀಡಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ಇನ್ನಿತರ ವಸತಿ ಯೋಜನೆಗಳಿಗೆ ಒತ್ತು ನೀಡುವುದರೊಂದಿಗೆ, ಕೇಂದ್ರ ಸರ್ಕಾರದ ದೂರದೃಷ್ಟಿಯ ಈ ಬಜೆಟ್ ರಾಜ್ಯದ 'ಸರ್ವರಿಗೂ ಸೂರು' ಒದಗಿಸುವಲ್ಲಿ ಸ್ಫೂರ್ತಿ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜನಸಾಮಾನ್ಯರ ಅವಶ್ಯಕತೆಗೆ ಒತ್ತು ಕೊಟ್ಟಿರುವ ಬಜೆಟ್: ಸಿಎಂ ಬೊಮ್ಮಾಯಿ
ಗ್ರಾಮೀಣಾಭಿವೃದ್ಧಿ, ನದಿಗಳ ಜೋಡಣೆ, ಮನೆ ಮನೆಗೂ ಶುದ್ಧ ಕುಡಿಯುವ ನೀರು, ಪ್ರತಿ ಗ್ರಾಮಕ್ಕೂ 5ಜಿ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಗೆ 20 ಸಾವಿರ ಕೋಟಿ ರೂಪಾಯಿಗಳು, ವಿಶ್ವದರ್ಜೆಯ ಡಿಜಿಟಲ್ ಪಾಠಶಾಲೆ, ದೇಶದ ನೂರು ಜಿಲ್ಲೆಗಳ ನಗರಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ, ಬೆಂಗಳೂರು ಮೆಟ್ರೋ ರೈಲು ಮಾರ್ಗ ವಿಸ್ತರಣೆ, ಉತ್ಪಾದನಾ ಕ್ಷೇತ್ರಕ್ಕೆ ನೀಡಲಾಗಿರುವ ಆದ್ಯತೆ ಸೇರಿದಂತೆ ಎಲ್ಲಾ ವಲಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ದೇಶದ ಎಲ್ಲಾ ವರ್ಗದ ಜನರ ಸಮಗ್ರ ಅಭಿವೃದ್ಧಿಗೆ ಪೂರಕ ಕೊಡುಗೆ ಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ