ಚಾಮರಾಜನಗರ: ಕಾಡಿನಲ್ಲೇ ಜೀವಿಸಿ ಕಾಡನ್ನೇ ದೇವರಾಗಿ ಕಾಣುವ ಈ ಸೋಲಿಗರಿಗೆ, ಆನೆ - ಹುಲಿ ಅಂದರೆ ಭಯವೂ ಇಲ್ಲ...! ಅವುಗಳಿಂದ ತೊಂದರೆಯೂ ಇಲ್ಲ...! ಆದರೆ ಕೋತಿಗಳ ವಿಪರೀತ ಕಾಟದಿಂದ ಚಾಮರಾಜನಗರ ತಾಲೂಕಿನ ಕನ್ನೇರಿ ಕಾಲನಿಯ ಜನರು ಈಗ ರೋಸಿಹೋಗಿದ್ದಾರೆ.
ಕನ್ನೇರಿ ಕಾಲನಿಯ ಗಿರಿಜನರ ಹಾಡಿಯಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು ಬಿಳಿಗಿರಿರಂಗನ ಬೆಟ್ಟ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೆ.ಗುಡಿ ವಲಯ ವ್ಯಾಪ್ತಿಗೆ ಒಳಪಡಲಿದೆ. ಕಳೆದ 15 ದಿನಗಳಿಂದ ವಾನರ ಸೇನೆ ಕೋತಿ ಹಿಂಡುವೂ ಪ್ರತ್ಯಕ್ಷವಾಗಿದ್ದು, ವನ್ಯಪ್ರಾಣಿಗಳಿಗೆ ಹೆದರದ ಜನರು ಈಗ ಇಲ್ಲಿನ ಕೋತಿಗಳಿಗೆ ಹೆದರುಬೇಕಾಗಿದೆ.
ಬಿಳಿಗಿರಿರಂಗನಾಥ ದೇವಸ್ಥಾನದಲ್ಲಿದ್ದ ಅಥವಾ ಬೇರೆ ಕಡೆಯಲ್ಲಿದ್ದ ಕೋತಿಗಳನ್ನು ಹಿಡಿದು ಅರಣ್ಯ ಇಲಾಖೆಯವರು ಕಾಲನಿ ಬಳಿ ತಂದು ಬಿಡುತ್ತಿದ್ದಾರೆ ಎಂಬ ಆರೋಪವಿದೆ. ಯಾವುದೇ ತೊಂದರೆಯಿಲ್ಲದೆ ಬದುಕು ಸಾಗಿಸುತ್ತಿದ್ದಕಾಲನಿ ಜನರಿಗೆ ಈಗ ಮಂಗಗಳಿಂದ ಪಜೀತಿ ತಂದಿಟ್ಟಿದ್ದಾರೆ.
ಕಾಳು ಕಡ್ಡಿ ಅಡುಗೆ ಉಳಿಸಿಕೊಳ್ಳುವುದು ಸಾಹಸ: ಮನೆಯ ಹೆಂಚನ್ನು ತೆಗೆದು ಒಳಗಿಳಿಯುವ ಕೋತಿಗಳು ಕಾಳು- ಕಡ್ಡಿ, ಊಟ, ಊಟದ ಪಾತ್ರೆಗಳು, ಮೊಟ್ಟೆ, ಎಣ್ಣೆ ಪ್ಯಾಕೆಟ್ ಇನ್ನಿತರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿವೆ., ಒಂದು ದಿನ. ಕಾಣಬಹುದು, ಎರಡು ದಿನ ಕಾಯಬಹುದು ನಾವುಗಳು ದಿನಾಲೂ ಕೂಲಿ ಕೆಲಸಕ್ಕೆ ಹೋದರೇ ಅವುಗಳದ್ದೇ ರಾಜ್ಯಭಾರ ಎಂದು ಸ್ಥಳೀಯ ಕೇತಮ್ಮ ಅಳಲು ತೋಡಿಕೊಂಡಿದ್ದಾಳೆ
ಪೌಷ್ಟಿಕ ಆಹಾರವೂ ಕಪಿ ಪಾಲು:ಕೋತಿಗಳಿಂದ ಬಹಳಷ್ಟು ತೊಂದರೆ ಉಂಟಾಗುತ್ತಿದೆ, ಸರ್ಕಾರ ಕೊಡುವ ಪೌಷ್ಟಿಕ ಆಹಾರವೂ ಕಪಿಗಳ ಪಾಲಾಗುತ್ತಿದೆ. ಸುಮಾರು 300 ಕ್ಕೂ ಹೆಚ್ಚು ಕೋತಿಗಳಿವೆ. ಆನೆಗಳು - ಹುಲಿಯಿಂದ ಸ್ಥಳೀಯ ಜನರಿಗೆ ತೊಂದರೆ ಇಲ್ಲ. ಈ ಕೋತಿಗಳಿಂದಲೇ ಹೆಚ್ಚು ತೊಂದರೆ ಅನುಭವಿಸಬೇಕಿದೆ. ತೋಟದ ಕಾಫಿ ಹಣ್ಣನ್ನು ತಿಂದು ಹಾಳಗೆಡುವುತ್ತಿವೆ. ಈ ಕೋತಿಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಅರಣ್ಯ ಇಲಾಖೆಗೆ ರಂಗೇಗೌಡ ಒತ್ತಾಯಿಸಿದ್ದಾರೆ.
ಇನ್ನಾದರೂ ಇದಕ್ಕೆ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಬೇರೆಡೆ ಕೋತಿಗಳನ್ನು ಸ್ಥಳಾಂತರಿಸುವದೊಂದಿಗೆ ಮಂಗಗಳ ಕಾಟದಿಂದ ಬೇಸತ್ತಿರುವ ಕಾಡಿನ ಮಕ್ಕಳ ಬದುಕಿಗೆ ನೆಮ್ಮದಿ ದೊರಕಿಸಿಕೊಡಬೇಕಿದೆ.
ಇದನ್ನೂ ಓದಿ:ಅನ್ನಭಾಗ್ಯ ಅಕ್ಕಿ ಮಾರಾಟ ತಡೆಯದಿದ್ದರೆ ಹೋರಾಟ: ಬ್ರಿಜೇಶ್ ಕಾಳಪ್ಪ