ಚಾಮರಾಜನಗರ : ಮಹಾಶಿವರಾತ್ರಿ ಆಚರಣೆಯು ಜಿಲ್ಲೆಯಲ್ಲಿ ಕಳೆಗಟ್ಟಿದೆ. ವಿವಿಧ ದೇವಾಲಯಗಳಿಗೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬರುತ್ತಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಂತೂ ಭಕ್ತಸಾಗರವೇ ಜಮಾಯಿಸಿದೆ.
ಮಲೆಮಹದೇಶ್ವರ ಬೆಟ್ಟದ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ದೇಗುಲದ ಪ್ರಾಂಗಣ, ಗರ್ಭಗುಡಿಗೆ ಹಣ್ಣು-ತರಕಾರಿಗಳಿಂದ ಅಲಂಕಾರ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಮುಸುಕಿನ ಜೋಳ, ಕಬ್ಬು, ಸೇಬು ಸೇರಿದಂತೆ ವಿವಿಧ ಹಣ್ಣು-ತರಕಾರಗಳಿಂದ ಮಲೆಮಹದೇಶ್ವರ ದೇವಾಲಯ ಸಿಂಗಾರಗೊಂಡು ಕಂಗೊಳಿಸುತ್ತಿದೆ.
ಇಂದು ಮಲೆ ಮಹದೇಶ್ವರನಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಸೇವೆ ನಡೆದಿದ್ದು ಸಂಜೆ ಹೊತ್ತಿಗೆ ಉತ್ಸವಗಳು ಜರುಗಲಿವೆ. ಬುಧವಾರ, ಅಮಾವಾಸ್ಯೆ ವಿಶೇಷ ಪೂಜೆ ನಡೆಯಲಿದ್ದು, ಗುರುವಾರ ಬೆಳಗ್ಗೆ 8.10 ರಿಂದ 8.45ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಮಾದೇಶ್ವರ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ.
ಅದೇ ದಿನ ರಾತ್ರಿ ಅಭಿಷೇಕ ಮುಗಿದ ಬಳಿಕ ನಡೆಯುವ ಕೊಂಡೋತ್ಸವದೊಂದಿಗೆ ಈ ಬಾರಿಯ ಶಿವರಾತ್ರಿ ಉತ್ಸವ ಮುಗಿಯಲಿದೆ. ರಥೋತ್ಸವಕ್ಕೆ ಸ್ಥಳೀಯರಿಗಷ್ಟೇ ಪಾಲ್ಗೊಳ್ಳಲು ಅವಕಾಶವಿದೆ ಎಂದು ಹೇಳಿದ್ದಾರೆ.
ಚಾಮರಾಜೇಶ್ವರ, ನೀಲಕಂಠೇಶ್ವರನಿಗೆ ವಿಶೇಷ ಪೂಜೆ : ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಐತಿಹಾಸಿಕ ಚಾಮರಾಜೇಶ್ವರ ದೇಗುಲಕ್ಕೆ ಮುಂಜಾನೆಯಿಂದಲೇ ಭಕ್ತರು ಆಗಮಿಸುತ್ತಿದ್ದು, ವಿಶೇಷ ರುದ್ರಾಭಿಷೇಕ ಪೂಜೆ ನಡೆದಿದೆ. ಉಳಿದಂತೆ, ಜಿಲ್ಲೆಯ ಎಲ್ಲಾ ಶಿವ ದೇವಾಲಯಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿದೆ. ರಾತ್ರಿ ಜಾಗರಣೆ ಮಾಡಿ ಶಿವನಾಮ ಸ್ಮರಿಸಲು ತಯಾರಿ ನಡೆಯತ್ತಿದೆ.
ಓದಿ :'ನಮ್ಮನ್ನು ರಕ್ಷಿಸಿ'....ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಅಳಲು!