ಚಾಮರಾಜನಗರ: ಕೃಷಿ ಸಚಿವ ಬಿ.ಸಿ. ಪಾಟೀಲ್ ಇಂದು ಗುಂಡ್ಲುಪೇಟೆಯಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ನಡೆಸಲು ಆಗಮಿಸಿದ ವೇಳೆ ಮಾಡ್ರಹಳ್ಳಿಯಲ್ಲಿ ಸಚಿವರಿಗೆ ಬಿಜೆಪಿ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು.
ಜಾನಪದ ಕಲಾತಂಡಗಳು, ಪೂರ್ಣಕುಂಭದ ಮೂಲಕ ಕೃಷಿ ಸಚಿವರನ್ನು ಬರಮಾಡಿಕೊಂಡ ಜನರು ಹೂಮಾಲೆ, ಪೇಟಗಳನ್ನು ಕೊಟ್ಟು ಸಚಿವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇದೇ ವೇಳೆ, ಗ್ರಾಮದ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಮಿಸಿದರು.
ಸಚಿವರಾದಿಯಾಗಿ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್ ಹಾಗೂ ಅಧಿಕಾರಿವರ್ಗ ಸೇರಿದಂತೆ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವಿಲ್ಲದೇ ನೂರಾರು ಜನರು ನೂಕು-ನುಗ್ಗಲಿನ ನಡುವೆ ಸಚಿವರಿಗೆ ಸ್ವಾಗತ ಕೋರಿದರು. ಗುಂಡ್ಲುಪೇಟೆ ತಾಲೂಕಿನ ಮುಂಟೀಪುರ ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಕ್ಷೇತ್ರ ಚಟುವಟಿಕೆಗಳಲ್ಲಿ ಸಚಿವರು ಇಂದು ಪಾಲ್ಗೊಳ್ಳಲಿದ್ದಾರೆ.