ಚಾಮರಾಜನಗರ : ರೈತರಿಗೆ, ರೈತ ಮಕ್ಕಳಿಗೆ ಹೆಣ್ಣು ಸಿಗಲ್ಲ ಎಂಬ ಮಾತನ್ನು ರೈತ ಮುಖಂಡರೊಬ್ಬರು ಸುಳ್ಳು ಮಾಡಿದ್ದಲ್ಲದೇ, ತಮ್ಮ ಮಗಳನ್ನು ಯುವರೈತರೊಬ್ಬರಿಗೆ 'ವಚನ ಮಾಂಗಲ್ಯ'ದ ಮೂಲಕ ಧಾರೆ ಎರೆದು ಕೊಟ್ಟಿದ್ದಾರೆ.
ಇಲ್ಲಿನ ರೈತ ಹೋರಾಟಗಾರ ಹೊನ್ನೂರು ಪ್ರಕಾಶ್ ಅವರು ತಮ್ಮ ಮಗಳು ಶೋಭಾರನ್ನು ಯುವರೈತ ಪೃಥ್ವಿ ಎಂಬುವರಿಗೆ ಕೊಟ್ಟು ಮದುವೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ರೈತ ನಾಯಕ ಪ್ರೊ.ಎಂಡಿಎನ್‌ರ ಅಮೃತ ಭೂಮಿಯಲ್ಲಿ ಯಾವ ಶಾಸ್ತ್ರಗಳ ಕಟ್ಟುಪಾಡುಗಳಿಲ್ಲದೇ ಬಸವಾದಿ ಶರಣರ ವಚನಗಳನ್ನು ಪಠಿಸುತ್ತಾ ವಿವಾಹ ಕಾರ್ಯ ನಡೆಯಿತು.
ಸಮಾನತೆಯ ಪ್ರತೀಕವಾಗಿ ವಧುವಿನಿಂದ ವರನ ಕೊರಳಿಗೆ ರುದ್ರಾಕ್ಷಿ ಧಾರಣೆ ಮಾಡಿದ ಬಳಿಕ, ವರನಿಂದ ವಧುವಿನ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿಸಲಾಯಿತು. ವಚನಗಳನ್ನು ಹೇಳುತ್ತಾ ನವಜೋಡಿ ದಾಂಪತ್ಯ ಜೀವನ ಕಾಲಿಟ್ಟಿದ್ದಲ್ಲದೇ, ವಚನ ಪ್ರತಿಜ್ಞೆಯನ್ನು ಕೈಗೊಂಡರು.
ಇದೇ ವೇಳೆ ರಕ್ತದಾನ ಜಾಗೃತಿಗಾಗಿ ವರ ಪೃಥ್ವಿ ರಕ್ತದಾನ ಮಾಡಿದರು. ಈ ಕಲ್ಯಾಣ ಮಹೋತ್ಸವದಲ್ಲಿ 20ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ರೈತರಿಗೆ, ರೈತರ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ ಎಂಬುದರ ವಿರುದ್ಧ ಅರಿವು ಮೂಡಿಸಲು ಹೊನ್ನೂರು ಪ್ರಕಾಶ್ ತಮ್ಮ ಮಗಳನ್ನು ರೈತನಿಗೇ ಕೊಟ್ಟು ಮದುವೆ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆಯಾ ವಿವಾದಿತ ಮತಾಂತರ ನಿಷೇಧ ಮಸೂದೆ?
ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ರಾಜಮುಡಿ ಅನ್ನ ಸೇರಿದಂತೆ ಸತ್ವಯುತ, ಆರೋಗ್ಯಯುತ ಆಹಾರವನ್ನು ಮದುವೆಯಲ್ಲಿ ಉಣಬಡಿಸಲಾಯ್ತು. ಈ ಅಪರೂಪದ ಮದುವೆಗೆ ಹತ್ತಾರು ಮಠಾಧೀಶರು, ರೈತ ಹೋರಾಟಗಾರರು ಸಾಕ್ಷಿಯಾದರು.