ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಪದವಿ ಕಾಲೇಜು ಉಳಿಸುವ ವಿಚಾರವಾಗಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ನೇತೃತ್ವದಲ್ಲಿ ತೆರಕಣಾಂಬಿ ವ್ಯಾಪ್ತಿಯ ನಿಯೋಗ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ವಿಧಾನಸೌಧದ ಉನ್ನತ ಶಿಕ್ಷಣ ಸಚಿವರ ಕೊಠಡಿಗೆ ತೆರಳಿದ ತಾಲೂಕಿನ ಬಿಜೆಪಿ, ಕಾಂಗ್ರೆಸ್, ರೈತ ಸಂಘದ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 20 ಮಂದಿಯ ನಿಯೋಗ ಪದವಿ ಕಾಲೇಜು ಉಳಿಸುವ ವಿಚಾರವಾಗಿ ಸುದೀರ್ಘವಾಗಿ ಸಚಿವರೊಂದಿಗೆ ಚರ್ಚೆ ನಡೆಸಿದರು. ಎಲ್ಲರ ಮಾತುಗಳನ್ನು ಆಲಿಸಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಕಾಲೇಜಿನ ವಿಚಾರವಾಗಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮತ್ತೊಮ್ಮೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕಾಲೇಜಿನ ಕಾರ್ಯಸೂಚಿಗಳ ಬಗ್ಗೆ ತಮಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಶಾಸಕ ಸಿ.ಎಸ್. ನಿರಂಜನಕುಮಾರ್ ಮಾತನಾಡಿ, ತೆರಕಣಾಂಬಿ ಕಾಲೇಜು ಉಳಿವಿಗಾಗಿ ರೈತರು ನಡೆಸುತ್ತಿರುವ ಹೋರಾಟ ಮತ್ತು ಸ್ಥಳಾಂತರದಿಂದ ವಿದ್ಯಾರ್ಥಿಗಳಿಗಾಗುವ ಸಮಸ್ಯೆಗಳ ಕುರಿತು ಸಚಿವರಿಗೆ ತಿಳಿ ಹೇಳಲಾಗಿದೆ. ಜೊತೆಗೆ ನಮ್ಮಲ್ಲಿಯೇ ಕಾಲೇಜು ಉಳಿದುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಿ ಎಂದು ಅವರಲ್ಲಿ ಮನವಿ ಮಾಡಲಾಗಿದೆ. ಅದಕ್ಕೆ ಸಚಿವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ನಿಯೋಗದಲ್ಲಿ ರೈತ ಸಂಘದ ಮಹೇಶ್ ಪ್ರಭು, ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ತಾಲೂಕು ಅಧ್ಯಕ್ಷ ಶಿವಮಲ್ಲು, ಶಾಂತಮಲ್ಲಪ್ಪ, ತಾಲೂಕು ಪಂಚಾಯತ್ ಸದಸ್ಯರಾದ ಮಂಡಿ ಮಹೇಶ್, ಲಕ್ಕೂರು ಶಿವಸ್ವಾಮಿ, ತೆರಕಣಾಂಬಿಯ ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಮಹದೇವಪ್ಪ, ಉಮೇಶ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು