ಚಾಮರಾಜನಗರ: ಹಳೆಯ ಹಾಡುಗಳಿಗೆ ಹೊಸ ಸಂಗೀತ ಸ್ಪರ್ಶ ನೀಡಿದ ಉದಾಹರಣೆಗಳು ಸಾಕಷ್ಟಿವೆ. ಇಲ್ಲೊಬ್ಬ ವಿಶೇಷ ಚಿಂತನೆಯ ಶಿಕ್ಷಕರಿದ್ದಾರೆ. ಇವರು ತಮಾಷೆ, ಜಾಗೃತಿ ಹಾಡುಗಳ ಮೂಲಕ ಮಕ್ಕಳನ್ನು ರಂಜಿಸುತ್ತಾ ಶಿಕ್ಷಣ ನೀಡುತ್ತಾರೆ.
ನಾನಿರುವುದೆ ನಿಮಗಾಗಿ, ನಾ ನಿನ್ನ ಮರೆಯಲಾರೆ, ಗುರುವಾರ ಬಂತಮ್ಮ.. ಹೀಗೆ ಹತ್ತು ಹಲವು ಅಣ್ಣಾವ್ರ ಸುಮಧುರ ಹಾಡುಗಳ ಸಂಗೀತಕ್ಕೆ ತಮ್ಮದೇ ಆದ ಸಾಹಿತ್ಯ ರಚಿಸಿರುವ ಈ ಶಿಕ್ಷಕ ಮಕ್ಕಳನ್ನು ಕುತೂಹಲದ ಕಡಲಲ್ಲಿ ತೇಲಿಸುತ್ತಾ, ಲವಲವಿಕೆಯಿಂದ ಪಾಠ ಹೇಳಿ ಕೊಡುತ್ತಾರೆ. ಇದನ್ನು ನೀವೂ ಒಮ್ಮೆ ನೋಡಿ..
ಚಾಮರಾಜನಗರ ತಾಲೂಕಿನ ಗೂಳಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಿಂಗರಾಜು ಮಕ್ಕಳ ನೆಚ್ಚಿನ ಶಿಕ್ಷಕ. ಇವರು ಹಾಡುಗಳ ಮೂಲಕ ನೀರಿನ ಜಾಗೃತಿ, ಸಂವಿಧಾನದ ಅರಿವು, ಅಂಬೇಡ್ಕರ್ ವಿಚಾರಧಾರೆ, ಮನರಂಜನೆಯ ಗಾಯನದ ಮೂಲಕ ಮಕ್ಕಳು ನಲಿಯುತ್ತಾ ಕಲಿಯುವಂತೆ ಪ್ರೇರೇಪಿಸುತ್ತಿದ್ದಾರೆ.
ತಮಾಷೆ ಹಾಡುಗಳಲ್ಲಿ ಜಾಗೃತಿ
ಭೂಮಿಯು ಬರಡಾಯಿತು-ಕತ್ತಲೆ ಕವಿದಾಯಿತು, ಶಾಂತಿ ದೂರವಾಯಿತು-ದಾರಿ ಕಾಣದಾಯಿತು, ಬಾಬಾ ಸಾಹೇಬ್ ಅಂಬೇಡ್ಕರ್- ಧರೆಯ ಬೆಳಗೋ ಓ ಭಾಸ್ಕರ, ನೂರೊಂದು ಚಪಾತಿ ತಿಂದು ಬದುಕಿರಲಾರೆ-11 ರೊಟ್ಟಿ ತಿಂದು ಜೀವಿಸಲಾರೆ, 1 ಹಂಡೆ ಪಾಯಸವನ್ನು ನಾ ಕುಡಿಯಲಾರೆ, ಸಾವಿರ ಜಾಮೂನೇ ಬರಲಿ, ಬಯಸುವುದು ಒಂದೇ.. ಹೀಗೆ 20 ಕ್ಕೂ ಹೆಚ್ಚು ಚಿತ್ರಗೀತೆಗಳ ಸಂಗೀತಕ್ಕೆ ತಮ್ಮದೇ ಸಾಹಿತ್ಯ ರಚಿಸಿ ಮಕ್ಕಳಿಗೆ ಮನರಂಜನೆ, ಮಾಹಿತಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ನಿಂಗರಾಜು, 'ಹಾಡುಗಳ ಮೂಲಕ ಮಕ್ಕಳನ್ನು ಬೇಗ ಹಿಡಿದಿಟ್ಟುಕೊಳ್ಳಲು ಸಾಧ್ಯವಾದ್ದರಿಂದ ಹಾಡಿನ ಮೂಲಕ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುತ್ತೇನೆ. ಹೀಗೆ ಪಾಠ ಮಾಡುವುದರಿಂದ ವಿದ್ಯಾರ್ಥಿಗಳು ಹೆಚ್ಚು ಲವಲವಿಕೆಯಿಂದ ಇರುತ್ತಾರೆ' ಎಂದು ತಿಳಿಸಿದರು.
ಇನ್ನು ಇವರು ರಿಮಿಕ್ಸ್ ಹಾಡುಗಳ ಮೂಲಕ ಮಕ್ಕಳಿಗೆ ನೀತಿ ಬೋಧನೆ, ಪಾಠ ಮಾಡುವುದಷ್ಟೇ ಅಲ್ಲದೆ ಮಕ್ಕಳಿಗೆ ಏಕಪಾತ್ರಾಭಿನಯ, ಯೋಗಾಸನಗಳನ್ನೂ ಹೇಳಿಕೊಡುತ್ತಾರೆ. ಇವರ ಗೀತೆಗಳಿಗೆ ಮಕ್ಕಳಷ್ಟೇ ಅಲ್ಲದೆ ಶಿಕ್ಷಕರು ಕೂಡ ಮನಸೋತಿದ್ದಾರೆ.