ಚಾಮರಾಜನಗರ: ತಮಿಳುನಾಡು-ಕೇರಳ ಗಡಿಗಳನ್ನು ಬಂದ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಚಾಮರಾಜನಗರ ಡಿಸಿ ಡಾ. ಎಂ.ಆರ್.ರವಿ ಸ್ಪಷ್ಟಪಡಿಸಿದ್ದಾರೆ.
ಕೇರಳ ಗಡಿ ಹಂಚಿಕೊಂಡಿರುವ ಮೂಲೆಹೊಳೆ ಚೆಕ್ ಪೋಸ್ಟಿಗೆ ಇಂದು ಭೇಟಿ ನೀಡಿದ ವಯನಾಡ್ ಡಿಸಿ ಅದಿಲಾ ಅಬ್ದುಲ್ಲಾ ಅವರೊಂದಿವೆ ಸಮಾಲೋಚಿಸಿದ ಬಳಿಕ ಮಾತನಾಡಿದ ಅವರು, ಎರಡು ರಾಜ್ಯಗಳ ನಡುವೆ ನಿತ್ಯ ವ್ಯಾಪಾರ ವಹಿವಾಟು ನಡೆಯುತ್ತದೆ. ರಾಜ್ಯದ ರೈತರ ಬೆಳೆಗಳು ಕೇರಳಕ್ಕೆ ರವಾನೆಯಾಗುವ ಕಾರಣ ಅಂತರ್ ರಾಜ್ಯ ಗಡಿ ಬಂದ್ ಮಾಡುವ ಆಲೋಚನೆ ಇಲ್ಲ. ಜಿಲ್ಲೆಯೊಳಗೆ ಬರುವವರು ಆರ್ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ತರಬೇಕು ಎಂದು ಹೇಳಿದರು.
ಕೊರೊನಾ ವರದಿ ತರುವ ಕುರಿತು ವ್ಯಾಪಕ ಪ್ರಚಾರ ಮತ್ತು ಅರಿವು ಮೂಡಿಸಬೇಕೆಂದು ವಯನಾಡ್ ಡಿಸಿ ಅವರಿಗೆ ತಿಳಿಸಿದ್ದೇನೆ, ಅದಕ್ಕೆ ಅವರು ಒಪ್ಪಿದ್ದಾರೆ. ಖಾಲಿ ಬರುವ ವಾಹನಗಳಿಗೆ ಸ್ಯಾನಿಟೈಸ್ ಮಾಡುವಂತೆ ಸೂಚಿಸಿದ್ದು, ನಾಳೆಯಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಿದ್ದಾರೆ. ಸರಕು ಸಾಗಾಟಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.