ಚಾಮರಾಜನಗರ: ಭಾರತ್ ಬಂದ್ ಕಾರ್ಮಿಕರ ಬೇಡಿಕೆಗಿಂತ ರಾಜಕೀಯ ಬೇಡಿಕೆಗಾಗಿ ಆದಂತಿದೆ ಎಂದು ಶಿಕ್ಷಣ ಹಾಗೂ ಕಾರ್ಮಿಕ ಸಚಿವ ಸುರೇಶ್ ಕುಮಾರ್ ಹೇಳಿದರು.
ನಗರದ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾಯಯುತ ಬೇಡಿಕೆಗಳನ್ನು ಚರ್ಚಿಸಿದರೆ ಅವುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರದ ಸಿದ್ಧವಿದೆ. ಆದರೆ ದಿಢೀರನೇ ಇವರ ಹೋರಾಟ ರಾಜಕೀಯವಾಗಿ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಬಂದ್ಗೆ ಕರೆ ನೀಡುವವರು ಜನ ವಿರೋಧಿಯಾಗಿರದಂತೆ ಯೋಚಿಸಬೇಕು. ಒಂದು ವೇಳೆ ಬಂದ್ ಯಶಸ್ವಿಯಾದರೆ ಅಂದೇ ದುಡಿದು ಅಂದೇ ತಿನ್ನುವವರ ಕಥೆ ಏನಾಗಬೇಕು ಎಂದು ಪ್ರಶ್ನಿಸಿದರು.
ಸಿ.ಟಿ.ರವಿ ಕನ್ನಡ ಸಂಘಟನೆಗಳ ಬಗ್ಗೆ ಮಾತನಾಡಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ. ನಮಗೆ ಕನ್ನಡ, ಕನ್ನಡ ಸಂಘಟನೆಗಳ ಬಗ್ಗೆ ಅಭಿಮಾನವಿದೆ ಎಂದರು. ಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆಗೆ ಮುಂದಿನ ವಾರ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುವುದಾಗಿ ಇದೇ ವೇಳೆ ತಿಳಿಸಿದರು.