ಚಾಮರಾಜನಗರ : ಭೂ ಸುಧಾರಣೆ, ಎಪಿಎಂಸಿ ಸೇರಿ 8 ವಿವಿಧ ಕಾಯ್ದೆಗಳ ತಿದ್ದುಪಡಿ ವಾಪಸ್ ಪಡೆಯಲು ಆಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರೈತ ಸಂಘಟನೆಗಳ ಬಂದ್ ಕರೆಗೆ ಆಟೋ, ಟ್ಯಾಕ್ಸಿ, ಲಾರಿ ಚಾಲಕ ಮಾಲೀಕರ ಸಂಘ ಸೇರಿ ಕನ್ನಡ ಪರ ಸಂಘಟನೆಗಳು, ಎಸ್ಡಿಪಿಐ, ದಲಿತ ಪರ ಸಂಘಟನೆಗಳು, ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಸೋಮವಾರ ಬೆಳಗ್ಗೆ 6 ರಿಂದ ಸಂಜೆ 6ಗಂಟೆವರೆಗೆ ಬಂದ್ ಮಾಡಲು ರೈತ ಸಂಘಟನೆಗಳು ಸಜ್ಜಾಗಿವೆ. ಜಿಲ್ಲಾ ಕೇಂದ್ರ ಸೇರಿ ತಾಲೂಕು ಕೇಂದ್ರಗಳಲ್ಲೂ ರೈತ ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿವೆ. ಪರಿಸ್ಥಿತಿ ಅವಲೋಕಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಕೆಸ್ಆರ್ಟಿಸಿ ನಿರ್ಧರಿಸಿದೆ. ಹಾಲು, ಹಣ್ಣು, ತರಕಾರಿ, ಔಷಧಿ ಅಂಗಡಿಗಳ ವ್ಯಾಪಾರಕ್ಕೆ ಯಾವುದೇ ಅಡ್ಡಿಯಿಲ್ಲ. ವರ್ತಕರ ಸಂಘ, ಹೋಟೆಲ್ ಮಾಲೀಕರು ನಾಳಿನ ಬಂದ್‌ಗೆ ಬೆಂಬಲ ನೀಡುವ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ.
ಬಿಗಿ ಪೊಲೀಸ್ ಬಂದೋಬಸ್ತ್ : ಬಂದ್ ಹಿನ್ನೆಲೆ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿದೆ. ಒತ್ತಾಯಪೂರ್ವಕ ಬಂದ್ ಮಾಡಿಸಲು ಅವಕಾಶವಿಲ್ಲವೆಂದು ಸಂಘಟನೆಗಳಿಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಒಂದು ಕೆಎಸ್ಆರ್ಪಿ, 11 ಡಿಎಆರ್ ಪ್ಲಟೂನ್, 10 ಇನ್ಸ್ಪೆಕ್ಟರ್ಗಳು, 19 ಪಿಎಸ್ಐಗಳು, ಎರಡು ಡಿವೈಎಸ್ಪಿ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ.