ಧಾರವಾಡ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕಾರ ಆರಂಭವಾಗಿದ್ದು, ಇಂದು ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಜರುಗಲಿದ್ದು, ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾಗಿದೆ. ತಾಲೂಕಿನ ರಾಮಾಪೂರ ಗ್ರಾಮ ಪಂಚಾಯಿತಿಗೆ ಒಂದು ಮತ್ತು ತಡಕೊಡ ಗ್ರಾಮ ಪಂಚಾಯಿತಿಗೆ ಒಂದು ನಾಮಪತ್ರ ಸಲ್ಲಿಕೆಯಾಗಿದೆ.
ಅದೇ ರೀತಿ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮ ಪಂಚಾಯಿತಿಗೆ ಎರಡು, ಉಗ್ಗಿನಕೇರಿ ಗ್ರಾಮ ಪಂಚಾಯಿತಿಗೆ ಮೂರು, ಸೂರಶೆಟ್ಟಿಕೊಪ್ಪ ಗ್ರಾಮ ಪಂಚಾಯಿತಿಗೆ ಒಂದು ಮತ್ತು ದಾಸ್ತಿಕೊಪ್ಪ ಗ್ರಾಮ ಪಂಚಾಯಿತಿಗೆ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.
ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಇಂದು ಒಟ್ಟು 2 ನಾಮಪತ್ರಗಳು ಮತ್ತು ಕಲಘಟಗಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಒಂಭತ್ತು ನಾಮಪತ್ರಗಳು ಸೇರಿ ಒಟ್ಟು ಹನ್ನೊಂದು ನಾಮಪತ್ರಗಳು ಸಲ್ಲಿಕೆಯಾಗಿವೆ. ಅಳ್ನಾವರ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಇಂದು ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ 44 ನಾಮಪತ್ರ ಸಲ್ಲಿಕೆ: ಜಿಲ್ಲೆಯ ಗ್ರಾಮ ಪಂಚಾಯಿತಿಯ ಮೊದಲು ಹಂತದ ಚುನಾವಣೆಗೆ ಮೊದಲ ದಿನ ವಿವಿಧ ಕ್ಷೇತ್ರಗಳಿಂದ 44 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲೆಯ 12 ತಾಲೂಕಿನ 212 ಗ್ರಾಮ ಪಂಚಾಯಿತಿಗಳ ಪೈಕಿ 201 ಗ್ರಾಮ ಪಂಚಾಯಿತಿಗೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ 8 ತಾಲೂಕಿನ 111 ಗ್ರಾಮ ಪಂಚಾಯಿತಿಯ 2126 ಸದಸ್ಯ ಸ್ಥಾನಕ್ಕೆ ಡಿ. 22ರಂದು ಮತದಾನ ನಡೆಯಲಿದೆ.
ಓದಿ: ಭಾರತ್ ಬಂದ್: ನಾಳೆ ಏನಿರುತ್ತೆ, ಏನಿರಲ್ಲಾ?
ಇಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ಮೊದಲ ದಿನ 44 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ವಿಜಯಪುರ- 17 ಗ್ರಾಪಂಗೆ ಇಬ್ಬರು, ತಿಕೋಟಾ 14ರ ಪೈಕಿ ಇಬ್ಬರು, ನಿಡಗುಂದಿ 8ರ ಪೈಕಿ ಒಬ್ಬರು, ಮುದ್ದೇಬಿಹಾಳ 20ರ ಪೈಕಿ 28 ಹಾಗೂ ತಾಳಿಕೋಟೆಯ 14ರ ಪೈಕಿ ಒಟ್ಟು 44 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಬಲೇಶ್ವರ, ಬಾಗೇವಾಡಿ, ಕೊಲ್ಹಾರ ತಾಲೂಕಿನ 38 ಗ್ರಾಮ ಪಂಚಾಯಿತಿಗಳಿಗೆ ಯಾರೊಬ್ಬರು ನಾಮಪತ್ರ ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಡಿ. 11ರಂದು ಕೊನೆ ದಿನವಾಗಿದೆ.
ಚಾಮರಾಜನಗರದಲ್ಲಿ ಮೊದಲ ದಿನ 14 ನಾಮಪತ್ರಗಳು ಸಲ್ಲಿಕೆ: ಮೊದಲ ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೊದಲ ದಿನವಾದ ಇಂದು ಒಟ್ಟು 14 ನಾಮಪತ್ರಗಳು ಸಲ್ಲಿಕೆಯಾಗಿವೆ.