ಕೊಳ್ಳೇಗಾಲ (ಚಾಮರಾಜನಗರ) : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಲು ಸಾರ್ವಜನಿಕರ ಶಿಕ್ಷಣ ಇಲಾಖೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮನೋಸ್ಥೈರ್ಯ ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರಿಗಿರುವ ಜವಾಬ್ದಾರಿಯನ್ನು ಅರಿವು ಮೂಡಿಸಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಮಾತೃ-ಪಿತೃ ವಂದನಾ ಕಾರ್ಯಕ್ರಮ ನಿನ್ನೆ ಕೊಳ್ಳೇಗಾಲದಲ್ಲಿ ನಡೆಯಿತು.
ಸರ್ಕಾರಿ ಎಸ್.ವಿ.ಕೆ.ಪ.ಪೂ ಕಾಲೇಜಿನ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೊಳ್ಳೇಗಾಲ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ "ಮಾತಾ-ಪಿತೃ" ವಂದನಾ ಮತ್ತು ಪೋಷಕರೊಡನೆ ಸಂವಾದ ಕಾರ್ಯಕ್ರಮಕ್ಕೆ ಶಾಸಕ ಎನ್ ಮಹೇಶ್ ಚಾಲನೆ ನೀಡಿದರು.
ಪಟ್ಟಣದ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರೌಢಶಾಲಾ ಶಾಲೆಯಲ್ಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಂದಿರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳು ಸಾಮೂಹಿಕವಾಗಿ ತಮ್ಮ ತಂದೆ- ತಾಯಿಗಳ ಪಾದಗಳನ್ನು ತೊಳೆದು ಅರಿಶಿನ-ಕುಂಕುಮ ಹಚ್ಚಿ, ಪುಷ್ಪಾರ್ಚನೆ ಮಾಡಿ ಪಾದ ಪೂಜೆ ಮಾಡಿದರು. ಮೂಲಕ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಓದಿದ ಶಾಲೆಗೆ ಕೀರ್ತಿ, ಗುರುಗಳಿಗೆ ಗೌರವ ತಂದೆ- ತಾಯಿಯ ಕನಸ್ಸನ್ನು ನನಸು ಮಾಡುತ್ತೇವೆಂದು ಸಂಕಲ್ಪ ತೊಟ್ಟರು. ಮಕ್ಕಳು ಪೋಷಕರ ಪಾದ ಸ್ಪರ್ಶಿಸಿ ಪೂಜೆ ಮಾಡಲು ಮುಂದಾದಾಗ ಭಾವುಕರಾದ ಪೋಷಕರು ಒಳ್ಳೆಯದಾಗಲಿ ಚೆನ್ನಾಗಿ ಓದಿ ಎಂದು ಆಶೀರ್ವಾದಿಸಿದರು.
ಇದೇ ವೇಳೆ ಶಾಸಕ ಎನ್.ಮಹೇಶ್ ಮಾತನಾಡಿ, ಮಾತೃ- ಪಿತೃ ವಂದನಾ ಕಾರ್ಯಕ್ರಮ ವಿಶೇಷವಾಗಿದ್ದು, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ತಂದೆ- ತಾಯಿಗಳ ಪಾದ ಪೂಜೆ ಮಾಡುವ ಮೂಲಕ ಪೋಷಕರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮೂಲಕ ಮಕ್ಕಳನ್ನು ಓದಿಸಬೇಕೆಂಬ ಅನಿಸಿಕೆಯನ್ನು ಪೋಷಕರಲ್ಲಿ ಹುಟ್ಟು ಹಾಕುವುದು ಇದರ ಉದ್ದೇಶವಾಗಿದೆ. ಪಾದ ಪೂಜೆ ಮಾಡಿದ ಮಕ್ಕಳಿಗೆ ಚೆನ್ನಾಗಿ ಓದಲಿ, ಎತ್ತರಕ್ಕೆ ಬೆಳೆಯಲಿ ಎಂದು ಹೃದಯದಿಂದ ತಂದೆ- ತಾಯಿಗಳು ಆಶೀರ್ವಾದಿಸಿದ್ದಾರೆ. ಮಾತೃ- ಪಿತೃ ವಂದನಾ ಒಂದು ಪ್ರೇರಕ ಶಕ್ತಿಯಾಗಿ ಕೆಲಸಮಾಡುತ್ತೆ ಎಂದರು.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿ
ಮಕ್ಕಳು ಒಂದು ಬಿಳಿ ಹಾಳೆ ಇದ್ದಂತೆ - ಎನ್.ಮಹೇಶ್
ಮಕ್ಕಳು ಒಂದು ಬಿಳಿ ಹಾಳೆ ಇದ್ದಂತೆ ಹಾಳೆಯ ಮೇಲೆ ಹೂವನ್ನು ಬಿಡಿಸಬಹುದು, ಕತ್ತೆ, ಕುದರೆಯನ್ನು ಬಿಡಿಸಬಹುದಾಗಿದೆ. ಆದ್ದರಿಂದ ಇಂತಹ ಬಿಳಿ ಹಾಳೆಯಲ್ಲಿ ಶಿಕ್ಷಕರು ಮತ್ತು ಪೋಷಕರು ಸುಂದರ ಚಿತ್ರವನ್ನು ಬಿಡಿಸುವ ಕೆಲಸ ಮಾಡಬೇಕು. 2 ತಿಂಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಕಟವಾಗುತ್ತೆ ಮಕ್ಕಳು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಬೇಕೆಂದು ಶಾಸಕರು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಿಕ್ಷಕರಿಗಿಂತ ಪೋಷಕರ ಪಾತ್ರವೇ ದೊಡ್ಡದಾಗಿರುತ್ತದೆ. ಒಬ್ಬ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ಉತ್ತಮವಾಗಿ ಓದಿಸಲು ವಿಶೇಷ ತರಬೇತಿ ನೀಡಿದರು. ಮನೆಯಲ್ಲಿ ಪೋಷಕರ ಜವಾಬ್ದಾರಿ ಶಿಕ್ಷಕರಿಗಿಂತ ದುಪ್ಪಟ್ಟು ಇರುತ್ತದೆ. ಮಕ್ಕಳಿಗೆ ಓದಿನ ಒತ್ತಡ ಹೇರದೆ ಪ್ರೀತಿಯಿಂದ ವಿಶ್ವಾಸಕ್ಕೆ ತೆಗೆದುಕೊಂಡು ಅವರೊಡನೆ ಉತ್ತಮ ಬಾಂಧವ್ಯ ಬೆಳಿಸಿ ಓದಿಸಬೇಕು. ಆಗ ಮಾತ್ರ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯ, ಪ್ರತಿಯೊಬ್ಬ ತಂದೆ-ತಾಯಿಯು ತಮ್ಮ ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ತಿಳಿಸಿದರು.
ನನಗೆ ತಂದೆ ಇಲ್ಲ, ತಾಯಿನೇ ಎಲ್ಲಾ ಎಂದು ಕಣ್ಣಿರಿಟ್ಟ ವಿದ್ಯಾರ್ಥಿನಿ: ಮಾತೃ- ಪಿತೃ ವಂದನಾ ಉದ್ದೇಶಿಸಿ ಶಾಸಕರ ಎದುರು ಮಾತನಾಡಿದ ಸಂಜನ ಎಂಬ ವಿದಾರ್ಥಿ, ಮಾತೃ- ಪಿತೃ ವಂದನಾ ಕಾರ್ಯಕ್ರಮದಲ್ಲಿ ನನ್ನ ತಾಯಿ ಪಾದ ಪೂಜೆ ಮಾಡಿರುವುದು ನನಗೆ ಇನ್ನೂ ಹೆಚ್ಚಿನ ಓದಿಗೆ ಸ್ಪೂರ್ತಿ ತಂದಿದೆ. ಗುರುಗಳು ಹಾಗೂ ಪೋಷಕರ ಆಶೀರ್ವಾದ ನಮಗೆ ಬೇಕೆ ಬೇಕು. ಅದರಂತೆ ತಾಯಿ ಚೆನ್ನಾಗಿ ಓದು ಎಂದು ಆಶೀರ್ವಾದಿಸಿದ್ದಾರೆ. ನನಗೆ ತಂದೆ ಇಲ್ಲ ತಾಯಿಯೇ ಎಲ್ಲಾ, ಅಮ್ಮನಿಗೆ ನಾವು 4 ಜನ ಹೆಣ್ಣು ಮಕ್ಕಳಿದ್ದು, ದಿನಕ್ಕೆ 200 ರೂ.ಕೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದಾರೆ. ಇದರಿಂದ ಚೆನ್ನಾಗಿ ಓದಿ ಪೋಷಕರ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯುತ್ತೇನೆ ಎಂದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಭಾವುಕರಾದರು.