ಚಾಮರಾಜನಗರ: ಕೊರೊನಾ ಸೋಂಕು ತಗುಲಿದವರ ಮೇಲೆ ನಿಗಾ ಇಡಲು ಗಡಿಜಿಲ್ಲೆಯ ಇಂಜಿನಿಯರಿಂಗ್ ಪದವೀಧರ ಕೊರೊನಾ ಟ್ರ್ಯಾಕರ್ ಎಂಬ ಟೆಕ್ನಾಲಜಿ ಅಭಿವೃದ್ಧಿಪಡಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸರ್ಕಾರದ ಗಮನಕ್ಕೆ ಇದನ್ನು ತರಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಹರ್ಷಲ್ ಭೋಯರ್ ಹೇಳಿದ್ದಾರೆ.
ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದ ಪವನ್ ಕುಮಾರ್ ನಾಯ್ಕ್ ಎಂಬ ಇಂಜಿನಿಯರಿಂಗ್ ಪದವೀಧರ ತನ್ನ ಸಹಪಾಠಿ ಸಚಿನ್ ಜೊತೆ ಸೇರಿ 'ಕೊರೊನಾ ಟ್ರ್ಯಾಕರ್' ಎಂಬ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾನೆ. ಕೊರೊನಾ ಟ್ರ್ಯಾಕರ್ ಓರ್ವ ವ್ಯಕ್ತಿಯ ಸಂಚಾರದ ಮೇಲೆ ನಿಗಾ ಇಡುವುದಷ್ಟೇ ಅಲ್ಲದೇ ಆತನಿಗೆ ಜ್ವರದ ಲಕ್ಷಣ ಕಂಡುಬಂದರೇ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ರವಾನಿಸಲಿದೆ. ಪ್ರತಿನಿತ್ಯ ನೌಕರಿ, ಕೆಲಸ ಕಾರ್ಯಗಳಿಗೆ ಓಡಾಡುವರ ಮೇಲೆ ಗಮನವಿಟ್ಟು ಈ ತಂತ್ರಾಶ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ಪವನ್ ಕುಮಾರ್.
ಕೊರೊನಾ ಟ್ರ್ಯಾಕರ್ ಕೆಲಸ ಹೇಗೆ: ಸರ್ಕಾರಿ ನೌಕರರು, ಕೆಎಸ್ಆರ್ಟಿಸಿ ಸಿಬ್ಬಂದಿ, ಕಾರ್ಖಾನೆ ಕಾರ್ಮಿಕರು, ಕ್ಯಾಬ್, ಆಟೋ ಚಾಲಕರಿಗೆ ನಿರ್ದಿಷ್ಟ QR ಕೋಡ್ ಮೂಲಕ ಆ್ಯಪ್ ನೀಡಲಾಗುತ್ತದೆ. ಉದಾಹರಣೆಗೆ ಸಾಮಾನ್ಯನೋರ್ವ ಬಸ್ಸಿನಲ್ಲಿ ಸಂಚರಿಸಬೇಕಾದರೇ ಆತನ ಮೊಬೈಲ್ ನಂ, ವಿಳಾಸ ಎಲ್ಲವನ್ನೂ ಬರೆದುಕೊಳ್ಳಬೇಕು. ಆದರೆ, ಕಂಡಕ್ಟರ್ ಈ ಟ್ರ್ಯಾಕರ್ ಅಳವಡಿಸಿಕೊಂಡು ಕೇವಲ ಪ್ರಯಾಣಿಕನ ಆಧಾರ್ ಕಾರ್ಡ್, ಸ್ಕಾನ್ ಮಾಡಿದರಷ್ಟೇ ಸಾಕು. ಒಂದು ವೇಳೆ ಆತನಿಗೆ ಮುಂದೊಂದು ದಿನ ಕೊರೊನಾ ಸೋಂಕು ತಗುಲಿದರೆ ಆತ ಬಸ್ಸಿನಲ್ಲಿ ಎಲ್ಲೆಲ್ಲಿ ತಿರುಗಾಡಿದ್ದ ಎಂಬ ಮಾಹಿತಿ ಸಿ ಟ್ರ್ಯಾಕರ್(Corona Tracker) ನೀಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಡಿವೈಸ್ ಅಳವಡಿಸುವುದರಿಂದ ಜನರ ಸಂಚಾರದ ಮೇಲೆ ನಿಗಾ ಇಡುವ ಜೊತೆಗೆ ಟ್ರಾವೆಲ್ ಹಿಸ್ಟರಿ ಬೇಗ ಆರೋಗ್ಯ ಇಲಾಖೆಗೆ ದಕ್ಕಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ರೈಲು ಪ್ರಯಾಣ ಆರಂಭಗೊಂಡರೂ ಈ ಆ್ಯಪ್ ರೈಲ್ವೆ ಇಲಾಖೆಗೆ ವರದಾನವಾಗಲಿದೆ. ಆ್ಯಪ್ ಡಿಜಿಟಲ್ ಮನಿ ವರ್ಗಾವಣೆಯನ್ನೂ ಮಾಡುವುದರಿಂದ ಡಿಜಿಟಲ್ ಇಂಡಿಯಾ ಕಲ್ಪನೆಗೆ ತಕ್ಕಂತೆ ಇದು ಕಾರ್ಯ ನಿರ್ವಹಿಸಲಿದೆ ಎಂದು ಈಟಿವಿ ಭಾರತಕ್ಕೆ ಪವನ್ ಮಾಹಿತಿ ನೀಡಿದರು.
ಸಿಇಒ ಗಮನಕ್ಕೆ: ಈ ಟೆಕ್ನಾಲಜಿ ಕುರಿತು ಚಾಮರಾಜನಗರ ಜಿಪಂ ಸಿಇಒ ಹರ್ಷಲ್ ಭೋಯರ್ ಅವರಿಗೆ ಪವನ್ ಪಿಪಿಟಿ ಪ್ರಸೆಂಟೇಶನ್ ಮಾಡಿದ್ದು, ಅವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ, ಸರ್ಕಾರದ ಗಮನಕ್ಕೆ ಇದನ್ನು ತರಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ಪವನ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಮಹಾಮಾರಿಗೆ ತಂತ್ರಜ್ಞಾನದ ಮೂಲಕ ಬ್ರೇಕ್ ಹಾಕಲು ಮುಂದಾಗಿರುವ ಗಡಿ ಜಿಲ್ಲೆ ಯುವಕನತ್ತ ಸರ್ಕಾರ ಗಮನಿಸಿ ಇದರ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಿ ಪ್ರೋತ್ಸಾಹಿಸಬೇಕಿದೆ.