ಕೊಳ್ಳೇಗಾಲ : ಬೆನ್ನು ನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿಯೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಸೈ ಎನಿಸಿಕೊಂಡ ವಿದ್ಯಾರ್ಥಿನಿಯೋರ್ವಳನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶಂಸಿದ್ದಾರೆ.
ತಾಲೂಕಿನ ಹೊಸಮಾಲಂಗಿ ಗ್ರಾಮದ ಶ್ವೇತ ಎಂಬ ವಿದ್ಯಾರ್ಥಿನಿ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾಳೆ. ಶ್ವೇತ ಚೆನ್ನಾಗಿ ಓದುವ ವಿದ್ಯಾರ್ಥಿನಿಯಾಗಿದ್ದಳು. ಈಕೆ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಹಠತೊಟ್ಟಿದ್ದು, ಅದರಂತೆ ಅನಾರೋಗ್ಯದ ಸ್ಥಿತಿಯಲ್ಲೂ ಪರೀಕ್ಷೆ ಬರೆದಿದ್ದಾಳೆ.
ಕೆಲವು ತಿಂಗಳಿನಿಂದ ಬೆನ್ನುನೋವಿನಿಂದ ಬಳಲುತ್ತಿದ್ದ ಈ ಬಾಲಕಿ ಕೇವಲ ಒಂದು ತಿಂಗಳ ಹಿಂದೆ ನಿಮ್ಹಾನ್ಸ್ನಲ್ಲಿ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆರೋಗ್ಯ ಸಂಪೂರ್ಣ ಸ್ಥಿರವಾಗುವಷ್ಟರಲ್ಲಿಯೇ ಪರೀಕ್ಷೆ ನಿಗದಿಯಾಗಿತ್ತು. ಪೋಷಕರು ಪರೀಕ್ಷೆ ಬರೆಸುವ ವಿಚಾರದಲ್ಲಿ ಗೊಂದಲಕ್ಕೀಡಾಗಿದ್ದರು. ಆದರೆ, ಛಲಬಿಡದ ಶ್ವೇತಾ ಪರೀಕ್ಷೆ ಬರೆದಿದ್ದಾಳೆ.
ಈ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಾಸಕ ಎನ್.ಮಹೇಶ್ ಖುದ್ದು ವಿದ್ಯಾರ್ಥಿನಿ ಮನೆಗೆ ತೆರಳಿ ಬಾಲಕಿಯ ಯೋಗ ಕ್ಷೇಮ ವಿಚಾರಿಸಿದ್ದರು. ಅನಾರೊಗ್ಯದಿಂದ ಬಳಲುತ್ತಿದ್ದರೂ ದಿಟ್ಟತನದಿಂದ ಪರೀಕ್ಷೆ ಎದುರಿಸಿರುವುದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.