ಚಾಮರಾಜನಗರ/ಕೊಳ್ಳೇಗಾಲ: ಕೊರೊನಾ ಭೀತಿ ನಡುವೆ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಈ ಬಾರಿ ವಿಶೇಷವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ನ ಇಬ್ಬರು ವಿದ್ಯಾರ್ಥಿಗಳು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ 54 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 11,839 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇವರಲ್ಲಿ 10,806 ಹೊಸ ವಿದ್ಯಾರ್ಥಿಗಳು, 629 ಪುನಾರವರ್ತಿತ, 247 ಖಾಸಗಿ ಹಾಗೂ 81 ಮಂದಿ ವಿಶೇಷ ಚೇತನರಿದ್ದಾರೆ. ಹೊರ ಜಿಲ್ಲೆಯ 41 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡಿದ್ದಾರೆ.
ಕೊಳ್ಳೇಗಾಲ ವರದಿ: ಪರೀಕ್ಷಾ ಕೇಂದ್ರಕ್ಕೆ ಬರುವ ಪ್ರತಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿ, ಹ್ಯಾಂಡ್ ಸಾನಿಟೈಸ್ ಹಾಗೂ ಮಾಸ್ಕ್ ಧಾರಣೆ ಮಾಡಿಸುವ ಮೂಲಕ ಕೊಠಡಿಗೆ ಕಳುಹಿಸಿಕೊಟ್ಟಿದ್ದಾರೆ.
ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 7 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಗ್ರಾಮಾಂತರ ಪ್ರದೇಶವಾದ ಸತ್ತೇಗಾಲ, ಸಿಂಗಲನೂರು ಗ್ರಾಮಗಳಲ್ಲಿ 2 ಪರೀಕ್ಷಾ ಕೇಂದ್ರ, ಪಟ್ಟಣದಲ್ಲಿ 5 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.
ಒಟ್ಟು 2,092 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತಿದ್ದು, ಉಚಿತ ಸಾರಿಗೆ ವ್ಯವಸ್ಥೆ ಯೊಂದಿಗೆ ಮಕ್ಕಳನ್ನು ಕರೆತರಲಾಗಿದೆ. ಪ್ರತಿ ಕೇಂದ್ರಕ್ಕೆ ಐವರನ್ನು ಪರೀಕ್ಷಾ ವಾರಿಯರ್ಸ್ಗಳನ್ನು ನೇಮಿಸಲಾಗಿದೆ. ಅವರು ಪ್ರತಿಯೊಂದು ವ್ಯವಸ್ಥೆಯನ್ನು ಮೇಲು ಉಸ್ತುವಾರಿ ಮಾಡುತ್ತಾರೆ. ನಿರ್ಭಯದಿಂದ ಪರೀಕ್ಷೆ ಬರೆಸುವ ಉದ್ದೇಶದಿಂದ ವಿವಿಧ ಮುನ್ನೆಚ್ಚರಿಕೆ ಯೊಂದಿಗೆ ಅಚ್ಚುಕಟ್ಟಾಗಿ ನಡೆಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ ತಿಳಿಸಿದ್ದಾರೆ.