ಗುಂಡ್ಲುಪೇಟೆ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಸದನದಲ್ಲಿ ಧ್ವನಿ ಎತ್ತುವಂತೆ ಆಗ್ರಹಿಸಿ ತಾಲೂಕು ಆದಿಜಾಂಬವ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಪದಾಧಿಕಾರಿಗಳು, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸರ್ಕಾರಕ್ಕೆ 2012 ರಲ್ಲಿ ಸಲ್ಲಿಸಲಾಗಿದೆ. ಆಯೋಗ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ಇದುವರೆಗೂ ಯಾವುದೇ ಸರ್ಕಾರ ಮುಂದಾಗಿಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಹಾದಿಯಾಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ, ಅದಕ್ಕೂ ಮೊದಲು ಬಿಜೆಪಿ ಸರ್ಕಾರವೂ ಸ್ಪಂದಿಸಲಿಲ್ಲ. ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸಮುದಾಯದ ಪ್ರಮುಖ ಬೇಡಿಕೆ ಒಪ್ಪಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದರು.
ಈ ಬಗ್ಗೆ ಶಾಸಕರು ವಿಧಾನಸಭಾ ಅಧಿವೇಶನ ನಡೆಯುವ ವೇಳೆ ಧ್ವನಿ ಎತ್ತಿ ಸದಾಶಿವ ಆಯೋಗ ಜಾರಿಗೆ ಮಂತ್ರಿ ಮಂಡಲಕ್ಕೆ ಒತ್ತಾಯ ಹೇರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿ ಗೌರವಾಧ್ಯಕ್ಷ ಹಸಗೂಲಿ ಸಿದ್ದಯ್ಯ, ಅಧ್ಯಕ್ಷ ಮಳವಳ್ಳಿ ಮಹದೇವಯ್ಯ, ಪ್ರಧಾನ ಕಾರ್ಯದರ್ಶಿ ಕಲೀಗೌಡನಹಳ್ಳಿ ಸಿದ್ದರಾಜು, ಕಾನೂನು ಸಲಹೆಗಾರ ಸಿದ್ದೇಶ್, ರಾಚಯ್ಯ, ರಾಚಪ್ಪ, ದೊಡ್ಡಕರಿಯಯ್ಯ, ಮುಖಂಡರಾದ ಶಿವಣ್ಣ, ಕೆಂಪರಾಜು, ರಂಗಸ್ವಾಮಿ, ಮಡಹಳ್ಳಿಮಹದೇವ, ಅಂಹಳ್ಳಿಮಹದೇವ, ನಿಂಗಯ್ಯ, ರವಿ, ಗೋಪಾಲ್, ಪ್ರಕಾಶ್, ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು.