ಚಾಮರಾಜನಗರ: ಇಲ್ಲಿನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಇಂದು ಬಿಜೆಪಿಯು ಸೋಲಿನ ಪರಾಮರ್ಶೆ ಸಭೆ ನಡೆಯಿತು. ಸಭೆ ಆರಂಭದಲ್ಲೇ ಬಿಜೆಪಿ ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.
ವಿ. ಸೋಮಣ್ಣ ಅನುಯಾಯಿಗಳು ಸಭೆಯಲ್ಲಿ ತಮಗೂ ಮಾತನಾಡಲು ಅವಕಾಶ ಕೊಡಬೇಕು. ಚಾಮರಾಜನಗರದಲ್ಲಿ ಸತತ ಮೂರನೇ ಬಾರಿ ಬಿಜೆಪಿ ಸೋತಿದೆ. ಮೊದಲ ಬಾರಿ ಸೋತಾಗಾಲೂ ಹೀಗೆ ಹೇಳಿದಿರಿ, ಎರಡನೇ ಬಾರಿ ಸೋತಾಗಲೂ ಪರಾಮರ್ಶೆ ಅಂದಿರಿ, ಈಗಲೂ ಅದನ್ನೇ ಮಾಡುತ್ತೀದ್ದೀರಿ. ಕಾಂಗ್ರೆಸ್ ಗ್ಯಾರಂಟಿಗಳಿಂದ ಸೋಮಣ್ಣ ಸೋತಿಲ್ಲ ಎಂದು ಪಕ್ಷದ ನಾಯಕರಿಂದಲೇ ಅವರು ಸೋತಿದ್ದಾರೆ ಎಂದು ಕಿಡಿಕಾರಿದರು.
ನಾನು ಕೋರ್ ಕಮಿಟಿಯಲ್ಲಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ನಾಯಕರಿಗೆ ಮುಟ್ಟಿಸುತ್ತೇನೆ. ಮುಂದೆ ಈ ರೀತಿ ಆಗಬಾರದು ಎಂದು ಒತ್ತಾಯಿಸುತ್ತೇನೆ ಎಂದು ಡಿ.ವಿ. ಸದಾನಂದಗೌಡ ಭರವಸೆ ಕೊಟ್ಟರು. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಮಯ ಮಾಧ್ಯಮದವರನ್ನು ಹೊರಗಿಡಲಾಯಿತು. ಇನ್ನು, ಇಂದಿನ ಸಭೆಗೆ ವಿ. ಸೋಮಣ್ಣ ಗೈರು ಹಾಜರಾಗಿದ್ದರು. ಈ ಬಗ್ಗೆ, ಡಿವಿಎಸ್ ಮಾಧ್ಯಮದವರೊಟ್ಟಿಗೆ ಮಾತನಾಡಿ, ''ತಾನು ಸಭೆಗೆ ಬರುವುದಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ. ಸೋಲಿನ ನೋವಿನಿಂದ ಇನ್ನೂ ಅವರು ಹೊರಬಂದಿಲ್ಲ. ಕೋಪ ಇಲ್ಲಾ. ಆದರೆ, ನೋವಿನಿಂದ ಅವರು ಹೊರಬಂದಿಲ್ಲ'' ಎಂದು ಸ್ಪಷ್ಟನೆ ಕೊಟ್ಟರು.
ಸಭೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ಸಿ.ಎಸ್. ನಿರಂಜನಕುಮಾರ್ ಹಾಗೂ ಎನ್.ಮಹೇಶ್ ಇನ್ನಿತರರು ಇದ್ದರು.
ಇದನ್ನೂ ಓದಿ: ಅಕ್ಕಿ ಕೊಡದಿರುವ ನೀಚ ರಾಜಕಾರಣ ನಾವು ಮಾಡಲ್ಲ: ಡಿ.ವಿ. ಸದಾನಂದ ಗೌಡ
ಅಧಿಕಾರಿಗಳು ಯಾವಾಗ ಬಟ್ಟೆ ಹರ್ಕೊತ್ತಾರೋ ಗೊತ್ತಿಲ್ಲ: ಪಂಚ ಗ್ಯಾರಂಟಿ ಘೋಷಣೆ ಮಾಡಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಗೊಂದಲವನ್ನು ಸೃಷ್ಟಿ ಮಾಡುತ್ತಿದೆ ಎಂದು ಕೊಳ್ಳೇಗಾಲದ ಮಾಜಿ ಶಾಸಕ ಎನ್. ಮಹೇಶ್ ಆರೋಪಿಸಿದರು.
ಚಾಮರಾಜನಗರದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅವರು ಮಾತನಾಡಿ, ಗ್ಯಾರಂಟಿ ಜಾರಿಗಾಗಿ ಕಂಡಿಷನ್ಸ್ಗಳನ್ನು ಹಾಕಿ ಗೊಂದಲ ಉಂಟು ಮಾಡಿದ್ದು, ಐಎಎಸ್ ಅಧಿಕಾರಿಗಳು ತಲೆ ಪರಚಿಕೊಳ್ಳುತ್ತಿದ್ದಾರೆ. ಯಾವಾಗ ಬಟ್ಟೆ ಹರ್ಕೋತ್ತಾರೋ ಗೊತ್ತಿಲ್ಲ'' ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡಬೇಕು. ಜು.1 ರಿಂದ 15 ಕೆಜಿ ಅಕ್ಕಿ ಕೊಡದಿದ್ದರೇ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಶಕ್ತಿ ಯೋಜನೆ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಡೀಸೆಲ್ಗೂ ಅವರ ಬಳಿ ದುಡ್ಡು ಹೊಂದಿಸಲು ಸಾಧ್ಯವಿಲ್ಲ'' ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಎನ್ ಮಹೇಶ್ ಲೇವಡಿ ಮಾಡಿದ್ರು.
ಇದನ್ನೂ ಓದಿ: Power tariff hike: ವಿದ್ಯುತ್ ದರ ಹೆಚ್ಚಳ ಸಂಬಂಧ ನಾಳೆ ಕೈಗಾರಿಕೋದ್ಯಮಿಗಳೊಂದಿಗೆ ಸಿಎಂ ಸಭೆ, ನಂತರ ಪರಿಹಾರ- ಸಚಿವ ದರ್ಶನಾಪುರ