ಬೆಂಗಳೂರು: ಪ್ರಕರಣವೊಂದರ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಮ್ಮ ಮನೆಗೆ ಸಮನ್ಸ್ ಅಂಟಿಸಿ, ಮನೆಯಲ್ಲಿದ್ದ ಅಪ್ರಾಪ್ತೆಯನ್ನು ಬಲವಂತವಾಗಿ ನಿಲ್ಲಿಸಿ ಮೊಬೈಲ್ನಲ್ಲಿ ಫೋಟೊ ಹಿಡಿದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ವರದಿ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗವು ನಗರದ ಈಶಾನ್ಯ ವಿಭಾಗದ ಡಿಸಿಪಿಗೆ ನಿರ್ದೇಶನ ನೀಡಿದೆ.
ವಿದ್ಯಾರಣ್ಯಪುರ ನಿವಾಸಿ ಹಾಗೂ ಉದ್ಯಮಿ ಎಂ.ಕೆ. ಶಶಾಂಕ್ ಎಂಬವರು ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಿದವರು. ಈ ಸಂಬಂಧ ದೂರು ದಾಖಲಿಸಿಕೊಂಡ ಅಯೋಗವು ನಾಲ್ಕು ವಾರಗಳಲ್ಲಿ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ನಗರದ ಈಶಾನ್ಯ ವಿಭಾಗದ ಡಿಸಿಪಿಗೆ ನಿರ್ದೇಶಿಸಿದೆ. ಅಲ್ಲದೆ, ವಿಚಾರಣೆಯನ್ನ ಜನವರಿ 7ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಅಕ್ರಮವಾಗಿ ಶ್ರೀಗಂಧ ಪೂರೈಕೆ ಆರೋಪ; ಕಾವೇರಿ ಎಂಪೋರಿಯಂನಲ್ಲಿ ಅರಣ್ಯಾಧಿಕಾರಿಗಳ ಶೋಧ
ದೂರಿನ ವಿವರ: ನಿವೇಶನಕ್ಕೆ ಅತಿಕ್ರಮ ಪ್ರವೇಶಿಸಿ ಜೀವ ಬೆದರಿಕೆವೊಡ್ಡಿರುವುದಾಗಿ ಆರೋಪಿಸಿ ಶೇಖರ್ ಸೇರಿ ಇನ್ನಿತರರ ವಿರುದ್ಧ ಎಂ.ಕೆ. ಶಶಾಂಕ್ ಕಳೆದ ಅಕ್ಟೋಬರ್ 24ರಂದು ದೂರು ನೀಡಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ''ಸಂಬಂಧಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ನಾನು ಊರಿಗೆ ಹೋಗಿದ್ದೆ. ಈ ವೇಳೆ ಪೊಲೀಸರು ಮನೆಗೆ ಬಂದು ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಡಲು ಬಂದಿದ್ದಾರೆ. ಮನೆಯಲ್ಲಿ ತಾನು ಇರಲಿಲ್ಲ. ಮನೆ ಮುಂದೆ ನೋಟಿಸ್ ಅಂಟಿಸಿದ್ದಾರೆ. ಜೊತೆಗೆ, ಈ ನೋಟಿಸ್ ಅಂಟಿಸಿದ ಬಗ್ಗೆ ಸಾಕ್ಷ್ಯಕ್ಕಾಗಿ ನನ್ನ ಸಹೋದರನ ಪುತ್ರಿಯನ್ನು ನಿಲ್ಲಿಸಿ ಪೋಟೋ ಮತ್ತು ವಿಡಿಯೋ ತೆಗೆದುಕೊಂಡಿದ್ದಾರೆ. ಘಟನೆ ಬಳಿಕ ಬಾಲಕಿಗೆೆ ಜ್ವರ ಕಾಣಿಸಿಕೊಂಡಿತ್ತು. ಈ ಸಂಬಂಧ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿ ಶಶಾಂಕ್ ದೂರು ನೀಡಿದ್ದರು.
ಇದನ್ನೂ ಓದಿ: ಮಂಗಳೂರಿಗೆ ಮಾದಕ ವಸ್ತು ಕೊಕೇನ್ ಪೂರೈಸುತ್ತಿದ್ದ ನೈಜೇರಿಯಾ ಪ್ರಜೆ ಸೆರೆ