ಚಾಮರಾಜನಗರ: ಹಿಂದೂಗಳಿಗೆ ಹಬ್ಬಗಳಂದ್ರೆ ಸಂಭ್ರಮ, ಸಡಗರ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಅನೇಕ ಬಗೆಯ ವಿಶಿಷ್ಠ ಹಬ್ಬಗಳನ್ನು ತಲೆತಲಾಂತರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಪ್ರಸಿದ್ಧಿ, ವೈಶಿಷ್ಟ್ಯತೆ ಹೊಂದಿದೆ. ಈ ನಿಟ್ಟಿನಲ್ಲಿ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆಯುತ್ತಿರುವ ಹಬ್ಬವೊಂದು ಒಮ್ಮೆ ಎಲ್ಲರನ್ನೂ ರೋಮಾಂಚನಗೊಳಿಸಬಲ್ಲದು!.
ಹೌದು, ಪಾಳ್ಯ ಗ್ರಾಮದಲ್ಲಿ 19 ವರ್ಷಗಳ ಬಳಿಕ ಇಂದು ಸೀಗಮಾರಮ್ಮನ ಬಲಿ ಹಬ್ಬ ನಡೆಯಲಿದೆ. ಇಲ್ಲಿ ವ್ಯಕ್ತಿಯೊಬ್ಬರ ಪ್ರಾಣಪಕ್ಷಿ ಹಾರಿಹೋಗಿ 6 ತಾಸಿನ ಬಳಿಕ ಮತ್ತೆ ಆ ವ್ಯಕ್ತಿ ಬದುಕಿ ಬರ್ತಾರಂತೆ! ಹೀಗೂ ಉಂಟೇ! ಎಂದು ಉದ್ಘಾರ ತೆಗೆದರೂ ಅಚ್ಚರಿಯೇನಿಲ್ಲ ಬಿಡಿ. ಕಳೆದ ತಿಂಗಳ 24ರಂದು ಈ ಗ್ರಾಮದೇವತೆ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಇಂದು ತಡರಾತ್ರಿ ನರಬಲಿ ಆಚರಣೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಶವದ ಮೆರವಣಿಗೆ: ಸೀಗಮಾರಮ್ಮ ದೇವಾಲಯದ ಅರ್ಚಕರು ದೇವಿಗೆ ನಡೆದುಕೊಳ್ಳುವ ಒಕ್ಕಲಿನ ವ್ಯಕ್ತಿಯೊಬ್ಬರ ಎದೆಯ ಮೇಲೆ ಕಾಲಿಟ್ಟಾಗ ಅವರ ಪ್ರಾಣ ಪಕ್ಷಿ ಹಾರಿಹೋಗಲಿದೆ. ಬಳಿಕ ಆ ವ್ಯಕ್ತಿಯನ್ನು ಶವದ ಮೆರವಣಿಗೆ ರೀತಿ ಮಾಡಲಾಗುತ್ತದೆ. ಈ ಮೆರವಣಿಗೆ ಮುಗಿದ ಬಳಿಕ ದೇವಿಯ ತೀರ್ಥವನ್ನು ಪ್ರೋಕ್ಷಣೆ ಮಾಡಿದಾಗ ವ್ಯಕ್ತಿಗೆ ಮತ್ತೆ ಜೀವ ಬರುತ್ತದೆ ಎಂಬುದು ನಂಬಿಕೆ.
ಹಬ್ಬದ ವಿಶೇಷ ಅಂದ್ರೆ, ಬಲಿ ಹೊಂದಿದ್ದಾತ 6 ತಾಸು ಉಸಿರಾಟ ನಿಲ್ಲಿಸಲಿದ್ದಾನೆ. ಆತನನ್ನು ದೇವಾಲಯದಲ್ಲಿ ಮಲಗಿಸಿದ್ದಾಗ ಕಿವಿ, ಕಣ್ಣಿಗೆ ಇರುವೆಗಳು ಮುತ್ತಿಕ್ಕುತ್ತವಂತೆ. ಈ ವಿಶಿಷ್ಟ ಆಚರಣೆ ಇಂದು ಮಧ್ಯರಾತ್ರಿ 12.30ರಿಂದ ಮರುದಿನ ಬೆಳಗ್ಗೆ 10 ಗಂಟೆಯವರೆಗೆ ನಡೆಯಲಿದ್ದು, ಸಾವಿರಾರು ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ದೇಗುಲಗಳಲ್ಲಿ ಭಜನೆ, ಸುಪ್ರಭಾತ; ಬೆಳಗಾವಿಯ 500ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆ