ಗುಂಡ್ಲುಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಸಿ.ಎಸ್. ನಿರಂಜನ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವಯಂ ಪ್ರೇರಿತ ಲಾಕ್ಡೌನ್ಗೆ ನಿರ್ಧರಿಸಲಾಗಿದೆ.
ತಾಲೂಕಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ವಲಯದಲ್ಲಿ ಲಾಕ್ಡೌನ್ ಮಾಡಿ ಎಂಬ ಕೂಗು ಎದ್ದಿತ್ತು. ಇದರಿಂದಾಗಿ ಸಭೆ ನಡೆಸಿ ಪ್ರತಿ ದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ವ್ಯವಹಾರ ನಡೆಸಿ ಮಧ್ಯಾಹ್ನ 3ರ ನಂತರ ನಗರವನ್ನು ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ.
ಈ ವೇಳೆ ಮಾತನಾಡಿದ ಶಾಸಕ ಸಿ.ಎಸ್. ನಿರಂಜನ ಕುಮಾರ್, ಕೋವಿಡ್-19 ನಿಯಂತ್ರಣಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಕೈ ಜೋಡಿಸುತ್ತಿರುವುದು ಖುಷಿ ವಿಚಾರ, ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತ ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸಿ ಎಂದರು. ನಮ್ಮ ನಗರ ಕೊರೊನಾ ಪ್ರಾರಂಭವಾಗಿ ಎರಡು ತಿಂಗಳ ಕಾಲ ಹಸಿರು ವಲಯದಲ್ಲಿ ಇತ್ತು. ಈಗ ನಗರದಲ್ಲಿ ಕೊರೊನಾ ಹೆಚ್ಚಾಗಲು ಕಾರಣ ಹುಡುಕುವುದನ್ನು ಬಿಟ್ಟು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಚಿಂತಿಸಬೇಕಿದೆ ಎಂದರು. ಸಭೆಯಲ್ಲಿ ಅಂಗಡಿ ಮಾಲೀಕರು, ರೈತ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿ ಚರ್ಚಿಸಿದರು.