ಚಾಮರಾಜನಗರ : ಗಾಂಜಾ ಮಾರಾಟ ಮಾಡುತ್ತಿದ್ದರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ರಾಮಾಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡ ಘಟನೆ ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಿನ್ನತಂಬಿ (55) ಬಂಧಿತ ಆರೋಪಿ. ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸ್ ಠಾಣೆಯ ಪಿಐ ಮನೋಜ್ ಕುಮಾರ್ ನೇತೃತ್ವದ 12 ಮಂದಿಯ ತಂಡ ದಾಳಿ ನಡೆಸಿತ್ತು. ಈ ವೇಳೆ ಗಾಂಜಾ ಜೊತೆಗೆ ಶ್ರೀಗಂಧದ ಮರದ ತುಂಡುಗಳು ಸಿಕ್ಕಿವೆ.
ಬಂಧಿತನಿಂದ 550 ಗ್ರಾಂ ಒಣ ಗಾಂಜಾ, 55 ಕೆಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರವಷ್ಟೇ ಜಲ್ಲಿಪಾಳ್ಯ ಗ್ರಾಮದಲ್ಲಿ ಇಬ್ಬರನ್ನು ಬಂಧಿಸಿ 2 ಲಕ್ಷ ರೂ. ಮೌಲ್ಯದ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದರು.