ಚಾಮರಾಜನಗರ: ಲಾಕ್ಡೌನ್ ಸಡಿಲವಾದಂತೆ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಜಾಸ್ತಿ ಆಗಿದೆ. ಇದ್ದಕ್ಕಿದ್ದಂತೆ ನೂರಾರು ರೋಗಿಗಳು ಆಸ್ಪತ್ರೆಗೆ ಬಂದು ನೂಕು ನುಗ್ಗಲು ಉಂಟಾಯಿತು. ಅಲ್ಲದೆ, ಒಬ್ಬರ ಮೇಲೊಬ್ಬರು ಬಿದ್ದ ಪ್ರಸಂಗವೂ ನಡೆಯಿತು.
ಲಾಕ್ಡೌನ್ ವೇಳೆ ಮನೆಯಿಂದ ಹೊರಬಾರದ ಜನರು ಸಡಿಲವಾಗುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಲಗ್ಗೆ ಹಾಕಿ ಉಸಿರುಗಟ್ಟುವ ವಾತಾವರಣ ನಿರ್ಮಾಣ ಮಾಡಿದರು. ಭದ್ರತಾ ಸಿಬ್ಬಂದಿ ಮಾತನ್ನು ಲೆಕ್ಕಕ್ಕಿಡದ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ಜಾತ್ರೆಯಲ್ಲಿ ರಥ ಎಳೆಯಲು ಸಿದ್ಧರಾದವರಂತೆ ಕಂಡುಬಂದರು.
ಒಬ್ಬರ ನಂತರ ಮತ್ತೊಬ್ಬರು ಹೋಗುವ ಭರದಲ್ಲಿ ಒಬ್ಬರ ಮೇಲೊಬ್ಬರು ಬಿದ್ದ ಘಟನೆಗಳೂ ಜರುಗಿದವು. ಚೀಟಿ ಕೊಡುವ ಸ್ಥಳದಲ್ಲಿ ಬಿಟ್ಟರೆ ಜಿಲ್ಲಾಸ್ಪತ್ರೆಯ ಉಳಿದ ಎಲ್ಲಾ ಸ್ಥಳಗಳಲ್ಲೂ ಸಾಮಾಜಿಕ ಅಂತರ ದೂರದ ಮಾತಾಗಿತ್ತು. ಕೋವಿಡ್-19 ಕುರಿತು ಅತ್ಯಂತ ಹೆಚ್ಚು ಮುತುವರ್ಜಿ ವಹಿಸಬೇಕಾದ್ದ ಜಿಲ್ಲಾಸ್ಪತ್ರೆಯಲ್ಲಿಯೇ ಈ ಘಟನೆ ಕಂಡುಬಂದಿದ್ದು ವಿಪರ್ಯಾಸವೇ ಸರಿ.