ಚಾಮರಾಜನಗರ: ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಮಹೀಂದ್ರಾ ಟ್ರಾಕ್ಟರ್ ಶೋರೂಂನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರು ಮಹೀಂದ್ರಾ ಕಂಪನಿಯ ಹೊಸ ಟ್ರಾಕ್ಟರ್ ಅನ್ನು ಇಂದು ಖರೀದಿಸಿದರು. ಟ್ರಾಕ್ಟರ್ ಖರೀದಿಯ ನಂತರ ಮಾಧ್ಯಮದವರ ಜೊತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದ ಸೋಲಿನ ಬಗ್ಗೆ ಮಾತನಾಡಿದ ಬಿನ್ನಿ, "ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತೆ. ಅಸೀಸ್ ವಿರುದ್ಧದ ಟೆಸ್ಟ್ ಫೈನಲ್ ವೇಳೆ ಮೊದಲ ದಿನ ಸರಿಯಾಗಿ ಆಡಲಿಲ್ಲ, ಟೀಂ ಆಯ್ಕೆಯ ವೇಳೆ ಒಂದು ಸಣ್ಣ ತಪ್ಪು ಕೂಡಾ ಆಗಿದೆ. ಇಲ್ಲದಿದ್ದರೆ ಪಂದ್ಯ ಗೆಲ್ಲುತ್ತಿದ್ದೆವು" ಎಂದರು.
ಐಪಿಎಲ್ನಂತಹ ಲೀಗ್ಗಳು ಅಂತಾರಾಷ್ಟ್ರೀಯ ಪಂದ್ಯಗಳ ಸೋಲಿಗೆ ಕಾರಣ ಆಗುತ್ತಿದೆಯೇ ಎಂದು ಕೇಳಿದ್ದಕ್ಕೆ, "ಐಪಿಎಲ್ ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಯಾವುದೇ ತೊಂದರೆಯಿಲ್ಲ. ಟಿ20ಗೂ, ಏಕದಿನ, ಟೆಸ್ಟ್ ಪಂದ್ಯಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ನಾವು ಟೆಸ್ಟ್ ಕ್ರಿಕೆಟನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಟೆಸ್ಟ್ನಲ್ಲಿ ಕ್ರಿಕೆಟ್ ಭವಿಷ್ಯ ಅಡಗಿದೆ. ವೀಕ್ಷಕರ ಮನರಂಜನೆಗಾಗಿ ಐಪಿಎಲ್ ನಡೆಯುತ್ತದೆ" ಎಂದು ಹೇಳಿದರು.
ಮೂರು ಮಾದರಿಯ ಕ್ರಿಕೆಟ್ಗೆ ಬೇರೆ ಬೇರೆ ತಂಡಗಳನ್ನು ಮಾಡುವ ಬಗ್ಗೆ ಪ್ರಶ್ನಿಸಿದಾಗ, "ಟಿ20 ಇರಲಿ, ಏಕದಿನವಾಗಲಿ, ಟೆಸ್ಟ್ ಇರಲಿ ಎಲ್ಲದಕ್ಕೂ ಆಟಗಾರರು ಹೊಂದಿಕೊಳ್ಳಬೇಕು. ಆಗ ಅವರು ಉತ್ತಮ ಆಟಗಾರರಾಗಿರುತ್ತಾರೆ" ಎಂದು ಅಭಿಪ್ರಾಯಪಟ್ಟರು.
ಪಂದ್ಯದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಇಂಗ್ಲೆಂಡ್ನಲ್ಲಿ ಕಡಿಮೆ ಎಂದರೂ 25 ದಿನ ಅಭ್ಯಾಸಕ್ಕೆ ಅವಕಾಶ ಬೇಕಿತ್ತು ಎಂದಿದ್ದರು. ಆದರೆ ಈ ಮಾತನ್ನು ಬಿಸಿಸಿಐ ಅಧ್ಯಕ್ಷರು ತಳ್ಳಿಹಾಕಿದ್ದಾರೆ. ಆಟಗಾರರು ವರ್ಷಪೂರ್ತಿ ಕ್ರಿಕೆಟ್ ಆಡುತ್ತಿರುತ್ತಾರೆ. ಆಟಗಾರರು ಮೂರು ಮಾದರಿಗೆ ಹೊಂದಿಕೊಳ್ಳಬೇಕು ಎಂದರು.
ಆಡುವ ಹನ್ನೊಂದರ ಬಳಗದಲ್ಲಿ ಅಶ್ವಿನ್ ಆಯ್ಕೆ ಮಾಡದಿರುವ ಬಗ್ಗೆ ತಮ್ಮ ಅಭಿಪ್ರಾಯಿಸಿ, ತಂಡದ ಆಯ್ಕೆಯಲ್ಲಿ ಸಮಸ್ಯೆ ಆಗಿದೆ ಎಂದಿರುವ ಅವರು, ಅಶ್ವಿನ್ ಎಂದು ಗುರುತು ಮಾಡಿಲ್ಲ ಅಷ್ಟೇ. ಆದರೆ ಪರೋಕ್ಷವಾಗಿ ತಂಡದಲ್ಲಿ ರವಿಚಂದ್ರನ್ ಇರಬೇಕಿತ್ತು ಎಂದು ಹೇಳಿದರು.
ಐಪಿಎಲ್ ಬೆನ್ನಲ್ಲೇ ಟೆಸ್ಟ್: ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ನಡೆದ ನಂತರ 8 ದಿನದಲ್ಲಿ ಭಾರತ ತಂಡ ಇಂಗ್ಲೆಂಡ್ ಕಂಡೀಶನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಿತ್ತು. ಲೀಗ್ನಿಂದ ಹೊರಬಿದ್ದ ತಂಡದ ಆಟಗಾರರು ಮೊದಲೇ ಲಂಡನ್ಗೆ ಪ್ರವಾಸ ಬೆಳೆಸಿದ್ದರೂ ಅಭ್ಯಾಸಕ್ಕೆ ಹೆಚ್ಚಿನ ಕಾಲವಧಿ ಆಟಗಾರರಿಗೆ ಸಿಕ್ಕಿಲ್ಲ.
ಪಂದ್ಯ ಹೀಗಿತ್ತು..: ಜೂನ್ 7 ರಿಂದ 11ರ ವರೆಗೆ ನಡೆದ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಿತ್ತು. ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 469 ರನ್ ಬಿಟ್ಟುಕೊಟ್ಟಿತ್ತು. ಇದನ್ನು ಬೆನ್ನತ್ತಿದ ರೋಹಿತ್ ಪಡೆ 296ಕ್ಕೆ ಆಲ್ಔಟ್ ಆಯಿತು. ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ 173 ಮುನ್ನಡೆಗೆ 270 ರನ್ ಸೇರಿಸಿ 444 ಸ್ಕೋರ್ನ ಗುರಿ ನೀಡಿತ್ತು. ಇದನ್ನು ಬೆನ್ನತ್ತಿದ ಭಾರತ 234ಕ್ಕೆ ಸರ್ವಪತನ ಕಂಡು 209 ರನ್ ಸೋಲನುಭವಿಸಿತು.
ಇದನ್ನೂ ಓದಿ: Roger Binny: ಚಾಮರಾಜನಗರದಲ್ಲಿ ಹೊಸ ಟ್ರಾಕ್ಟರ್ ಖರೀದಿಸಿದ ರೋಜರ್ ಬಿನ್ನಿ: ಕೃಷಿಯತ್ತ ಒಲವು ತೋರಿದ ಬಿಸಿಸಿಐ ಅಧ್ಯಕ್ಷ