ಚಾಮರಾಜನಗರ: ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಒಂದಾದ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟ (ಬಿಆರ್‌ಟಿ) ರಾಷ್ಟ್ರೀಯ ವನ್ಯಜೀವಿಧಾಮದಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಇಲ್ಲಿನ ಪ್ರವಾಸಿ ಕೇಂದ್ರಗಳು ಹೊಸ ರೂಪ ಪಡೆದುಕೊಂಡಿವೆ.
ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ 80ರ ಕೆ.ಗುಡಿ ಹಾಗೂ ಯಳಂದೂರು ವಲಯಗಳಲ್ಲಿ ಪ್ರವಾಸಿಗರಿಗೆ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಸೂಚನಾಫಲಕಗಳನ್ನು ಅಳವಡಿಸಲಾಗಿದೆ.
ಇದೇ ಹೆದ್ದಾರಿಯಲ್ಲಿರುವ ಹೊಂಡರಬಾಳು ಚೆಕ್‌ಪೋಸ್ಟ್, ಕೆ.ಗುಡಿ ಚೆಕ್‌ಪೋಸ್ಟ್, ಮಾಹಿತಿ ಕೇಂದ್ರ, ಸಫಾರಿ, ಅತಿಥಿಗೃಹಗಳ ಗೋಡೆಗಳ ಮೇಲೆ ಇಲ್ಲಿನ ಅರಣ್ಯದಲ್ಲಿನ ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ಬಿಡಿಸಲಾಗಿದ್ದು, ಇವು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಕೆ.ಗುಡಿಯಲ್ಲಿನ ಪ್ರವಾಸಿ ಕೇಂದ್ರಗಳಿಗೆ ಹೊಸ ರೂಪ ನೀಡುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಯಳಂದೂರು, ಚಾಮರಾಜನಗರ ಪ್ರಾದೇಶಿಕ, ಪುಣಜನೂರು, ಕೊಳ್ಳೇಗಾಲ, ಬೈಲೂರು ವಲಯದಲ್ಲೂ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಚಿಂತನೆ ನಡೆದಿದೆ.
ವನ್ಯಜೀವಿಗಳ ಉಪಟಳ ಹೆಚ್ಚಿರುವ ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿ 209ರಲ್ಲೂ ಶೀಘ್ರವೇ ನಾಮಫಲಕಗಳ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿಆರ್‌ಟಿ ಹಾದು ಹೋಗಿರುವ 34 ಕಿ.ಮೀ ರಾಜ್ಯ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಅಕ್ಷರಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ಹಾಕಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ತರಬೇಕಾದ ಎಚ್ಚರಿಕೆಯನ್ನು ಈ ನಾಮಫಲಕಗಳಲ್ಲಿ ತಿಳಿಸಲಾಗಿದೆ.
ಪ್ರವಾಸಿಗರು ಪ್ರಾಣಿಗಳನ್ನು ನೋಡಲು ವಾಹನಗಳನ್ನು ನಿಲ್ಲಿಸುವ ಹಾಗೂ ನಿಂತು ಫೋಟೊ ತೆಗೆದುಕೊಳ್ಳುವ ಸ್ಥಳಗಳನ್ನು ಗುರುತಿಸಿ ನಾಮಫಲಕ ಅಳವಡಿಸಲಾಗಿದೆ. ಈ ಪ್ರವಾಸಿ ಕೇಂದ್ರದಲ್ಲಿ ನಾಮಫಲಕ ಬರೆಯುವ, ಚಿತ್ರ ಬಿಡಿಸುವ ಕೆಲಸವನ್ನು ಕಳೆದ ಒಂದು ತಿಂಗಳಿಂದ ಚಿತ್ರದುರ್ಗ ಮೂಲದ ಅರಣ್ಯ ಚಿತ್ರಕಲಾವಿದ ನಾಗರಾಜು ಎಂಬುವವರು ಮಾಡುತ್ತಿದ್ದಾರೆ.
ಕೆ.ಗುಡಿ ವಲಯದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬಂದಾಗ ಪ್ರವಾಸಿಗರು ಬಂದ ವೇಳೆ ಸಫಾರಿ ಕೇಂದ್ರ, ಕಚೇರಿ, ಚೆಕ್‌ಪೋಸ್ಟ್ ಹಾಗೂ ಮಾಹಿತಿ ಕೇಂದ್ರಗಳ ವ್ಯತ್ಯಾಸ ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಿದ್ದರು. ಇಲ್ಲಿನ ಕಚೇರಿ ಹಾಗೂ ಕಟ್ಟಡಗಳು ಒಂದೇ ಬಣ್ಣದಲ್ಲಿ ಇದ್ದರಿಂದ ಗೊಂದಲ ಉಂಟಾಗುತ್ತಿತ್ತು. ಹಾಗಾಗಿ ಎಲ್ಲ ಕಟ್ಟಡಗಳಿಗೂ ನಾಮಫಲಕ ಹಾಕಲಾಗುತ್ತಿದೆ’ ಎಂದು ಕೆ.ಗುಡಿ ವಲಯದ ಆರ್‌ಎಫ್‌ಒ ಶಾಂತಪ್ಪ ಪೂಜಾರ್ ಮಾಹಿತಿ ನೀಡಿದ್ದಾರೆ.
ಬಿಆರ್‌ಟಿ ವ್ಯಾಪ್ತಿಯ ಕೆ.ಗುಡಿಗೆ ಬರುವ ಪ್ರವಾಸಿಗರು ಇಲ್ಲಿ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ದೂರುತ್ತಿದ್ದರು. ಹಾಗಾಗಿ ಪ್ರವಾಸಿಗರಿಗೆ ಮಾಹಿತಿ ದೊರೆಯುವಂತೆ ಮಾಡುವ ನಿಟ್ಟಿನ ಜತೆಗೆ ಪ್ರವಾಸಿಗರನ್ನು ಸೆಳೆಯಲು ಹಾಗೂ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೃಹದಾಕಾರದಲ್ಲಿ ಚಿತ್ರಗಳು ಹಾಗೂ ಸೂಚನಾ ಫಲಕಗಳನ್ನು ಅಳವಡಿಸುತ್ತಿರುವುದು ಹೊಸ ಸ್ಪರ್ಶ ಸಿಕ್ಕಿದಂತಾಗಿದ್ದು ಕಾಡಿನ ಕಟ್ಟಡಗಳಲ್ಲೂ ಪ್ರಾಣಿ ಚಿತ್ತಾರ ಮೂಡಿದೆ.