ಚಾಮರಾಜನಗರ: ಪಠ್ಯಕ್ರಮದಲ್ಲಿ ಕೆಲ ಭಾಗಗಳನ್ನು ಕೈ ಬಿಟ್ಟಿರುವುದು ಸಾರ್ವಜನಿಕರಲ್ಲಿ ಬೇಸರ, ಗೊಂದಲ ಮೂಡಿಸಿದ್ದರಿಂದ ಅದನ್ನು ತಡೆ ಹಿಡಿದು ಮತ್ತೊಮ್ಮೆ ಪರಿಶೀಲಿಸಲು ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ ವರ್ಷದಲ್ಲಿ ದಿನಗಳು ಕಡಿತವಾಗಿದ್ದರಿಂದ ಪಠ್ಯಪುಸ್ತಕ ಸಮಿತಿ, ತಜ್ಞರಿಂದ ಶೇ. 30ರಷ್ಟು ಪಠ್ಯಕ್ರಮ ಕಡಿತಗೊಳಿಸಲು ನಿರ್ಧರಿಸಲಾಗಿತ್ತು. ಅದರಂತೆ ಮತ್ತೆ ಮತ್ತೆ ಕಲಿಯುವಂತಹ ವಿಷಯಗಳನ್ನು ಕೈ ಬಿಡಲಾಗಿತ್ತು. ಕೈ ಬಿಟ್ಟ ಪಠ್ಯದ ಕುರಿತು ಕೆಲವರು ಬೇಸರ ಹೊರ ಹಾಕಿದ್ದರಿಂದ ಮತ್ತೊಮ್ಮೆ ಪರಿಶೀಲಿಸಿ ವೈಜ್ಞಾನಿಕವಾಗಿ ಪಠ್ಯ ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಆಗಸ್ಟ್ 8ರೊಳಗೆ SSLC ಫಲಿತಾಂಶ
SSLC ಮೌಲ್ಯಮಾಪನ ಮುಗಿದಿದ್ದು, ಆ. 6-8ರ ಒಳಗೆ ಫಲಿತಾಂಶ ಪ್ರಕಟಿಸುತ್ತೇವೆ. ಇದಕ್ಕೆ ಸಿದ್ಧತೆ ನಡೆದಿದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ ಆಗಸ್ಟ್ನಲ್ಲಿ ಶಾಲೆಗಳನ್ನು ತೆರೆಯುತ್ತಿಲ್ಲ. ಪರಿಸ್ಥಿತಿ ತಿಳಿದು ಮುಂದೆ ನಿಶ್ಚಯ ಮಾಡಲಾಗುವುದು ಎಂದರು.
ಈ ಅವಧಿಯಲ್ಲಿ ಮಕ್ಕಳಲ್ಲಿ ಕಲಿಕೆ ಮುಂದುವರೆಸುವ ಸಲುವಾಗಿ ವಿದ್ಯಾಗಮ ಎಂಬ ಕಾರ್ಯಕ್ರಮ ರೂಪಿಸಿದ್ದು, ಪ್ರತಿ 20 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರನ್ನು ನೇಮಿಸಿ ಕಲಿಕೆ ಪ್ರಕ್ರಿಯೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ, ಯಡಿಯೂರಪ್ಪ ಸರ್ಕಾರ ಸುಭದ್ರವಾಗಿದೆ. ಪ್ರವಾಹ ಹಾಗೂ ಕೊರೊನಾ ಎಂಬ ಎರಡು ವಿಪತ್ತುಗಳನ್ನು ಯಶಸ್ವಿಯಾಗಿ ಎದುರಿಸಲಾಗುತ್ತಿದ್ದು, ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದರು.