ಕೊಳ್ಳೇಗಾಲ(ಚಾಮರಾಜನಗರ): ರೈತರ ಸಂಕಷ್ಟಕ್ಕೆ ಮಣಿದ ಸರ್ಕಾರ ಕೊರೊನಾ ಭೀತಿಯಿದ್ದರೂ ರೇಷ್ಮೆ ಗೂಡಿನ ಖರೀದಿಗೆ ಮಾರುಕಟ್ಟೆ ತೆರೆದಿತ್ತು. ಆದರೆ ರೀಲರ್ಸ್ಗಳು ಸಂಕಷ್ಟಕ್ಕೆ ಸಿಲುಕಿರುವ ಕಾರಣ ರೈತರ ಗೂಡು ತೆಗೆದುಕೊಳ್ಳದೇ ಹೊರಗುಳಿದ ಘಟನೆ ನಡೆದಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ - ವಹಿವಾಟಿಲ್ಲದೇ ರೈತರು, ಬೆಳೆಗಾರರು, ಉದ್ಯಮಿಗಳು ಸೇರಿದಂತೆ ಆರ್ಥಿಕ ವಲಯ ಸಾಕಷ್ಟು ನಷ್ಟ ಅನುಭವಿಸುತ್ತಿದೆ. ಕೊಳ್ಳೆಗಾಲದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಹಾಯಕ್ಕೆ ಮುಂದಾದ ಸರ್ಕಾರ ಕೊರೊನಾ ಭೀತಿಯಿದ್ದರೂ ಮಾರುಕಟ್ಟೆ ತೆರೆದಿತ್ತು. ಆದರೆ, ರೈತರ ತಂದಂತಹ ರೇಷ್ಮೆ ಗೂಡು ತೆಗೆದುಕೊಳ್ಳದೇ ಹೊರಗುಳಿದ ರೀಲರ್ಸಗಳು ಸಮಸ್ಯೆ ಕೇಳಲು ಅಧಿಕಾರಿಗಳು ಬರುವವರೆಗೂ ಗೂಡು ಖರೀದಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.
ರೀಲರ್ಸ್ಗಳ ಸಂಕಷ್ಟ:
ರೈತರು ತಾವು ತಂದ ಗೂಡನ್ನು ಸರಾಗವಾಗಿ ಮಾರಾಟ ಮಾಡಿ ಹೋಗುತ್ತಾರೆ. ಗೂಡು ಖರೀದಿಸಿದ ತಾವು ತಯಾರಿಸಿದ ರೇಷ್ಮೆ ಮಾರಾಟ ಮಾಡಲು ಅವಕಾಶ ಇಲ್ಲದ ಕಾರಣ ಟನ್ ಗಟ್ಟಲೆ ರೇಷ್ಮೆ ಉಳಿದು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ ಬಳಿ ಅಳಲು ತೋಡಿಕೊಂಡರು.
ರೀಲರ್ಸ್ಗಳ ಸಮಸ್ಯೆ ಆಲಿಸಿದ ಅಧಿಕಾರಿ, ಸಮಸ್ಯೆಗಳ ಬಗ್ಗೆ ಮೇಲಿನ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ರೇಷ್ಮೆ ಖರೀದಿಗೂ ಮೂರು ದಿನಗಳಲ್ಲಿ ಕ್ರಮ ವಹಿಸುತ್ತೇನೆ. ನಿಮ್ಮ ಬೇಡಿಕೆ ಈಡೇರಿಸುವಂತೆ ಮನವೊಲಿಸಿ ಗೂಡು ಖರೀದಿಗೆ ಮುಂದಾಗಲು ರೀಲರ್ಸ್ಗಳಿಗೆ ತಿಳಿಸಿದ್ದಾರೆ.