ಚಾಮರಾಜನಗರ: ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ವಿತರಿಸುತ್ತಿರುವ ದಿನಸಿ ಕಿಟ್ ಪಡೆಯಲು ಸಾವಿರಾರು ಮಂದಿ ಮುಗಿಬಿದ್ದ ಘಟನೆ ಇಂದು ನಗರದ ಎಪಿಎಂಸಿ ಸಮೀಪ ನಡೆದಿದ್ದು, ಕಿಲೋಮೀಟರ್ ಗಟ್ಟಲೇ ಜನಸಂದಣಿ ಏರ್ಪಟ್ಟಿತ್ತು. ಇದನ್ನು ಗಮನಿಸಿದರೆ ಇದು ಕೋವಿಡ್ ಹರಡಲು ಆಹ್ವಾನ ನೀಡಿದಂತಿದೆ.
ಮೂರುವರೆ ಸಾವಿರಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದರಿಂದ ಜನಜಾತ್ರೆಯೇ ಏರ್ಪಟ್ಟು, ಸಾಮಾಜಿಕ ಅಂತರ ಮಾಯವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಹೋದ ಪೊಲೀಸರ ಜೊತೆಗೆ ಕೆಲವರು ಮಾತಿನ ಚಕಮಕಿ ನಡೆಸಿದ್ರೆ, ಮತ್ತೆ ಕೆಲವರು ಲಾಠಿ ಏಟನ್ನೂ ತಿಂದರು.
ದಾಸ್ತಾನಿರುವ ದಿನಸಿ ಕಿಟ್ಗಿಂತಲೂ ಹೆಚ್ಚಿನ ಕಾರ್ಮಿಕರು ಆಗಮಿಸಿದ್ದರಿಂದ ಗೊಂದಲ ಏರ್ಪಟ್ಟಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳ ಟೋಕನ್ ವ್ಯವಸ್ಥೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಮಾಸ್ಕ್, ಸಾಮಾಜಿಕ ಅಂತರವಿಲ್ಲದೇ ಜನರು ಸೇರುತ್ತಿರುವುದರಿಂದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಕೊರೊನಾ ಹರಡುವ ಕೇಂದ್ರವಾಗಿ ಪರಿವರ್ತನೆ ಆದಂತೆ ಕಂಡುಬಂತು.
ಇನ್ನು, ಕೊಳ್ಳೇಗಾಲದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗಿದ್ದಕ್ಕೆ ಅಲ್ಲಿನ ನಿರೀಕ್ಷರಿಗೆ ಡಿಸಿ ನೋಟಿಸ್ ಕೊಟ್ಟಿದ್ದರು. ಇಷ್ಟಾದರೂ ಕೂಡ ಕಾರ್ಮಿಕ ಇಲಾಖೆ ಕೋವಿಡ್ ನಿಯಮಾನುಸಾರ ದಿನಸಿ ಕಿಟ್ ವಿತರಿಸಲು ಮುಂದಾಗದಿರುವುದು ವಿಪರ್ಯಾಸ. ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ದಿನಸಿ ಕಿಟ್ ಬಂದಿಲ್ಲದಿರುವುದು ಕೂಡ ಕಾರ್ಮಿಕರು ಮುಗಿಬೀಳಲು ಕಾರಣವಾಗಿದೆ ಎಂದು ತಿಳಿದುಬಂದಿದೆ.