ಚಾಮರಾಜನಗರ: ಶತಮಾನಗಳ ಬೇಡಿಕೆಯಾದ ರಾಮಮಂದಿರದ ಕನಸು ಬುಧವಾರ ಅಯೋಧ್ಯೆಯಲ್ಲಿ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಗಡಿಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಡ್ರೋಣ್ ಕಣ್ಗಾವಲು ಇರಿಸಲಾಗಿದೆ.
ಈ ಕುರಿತು ಎಸ್ಪಿ ದಿವ್ಯಾ ಸಾರಾ ಥಾಮಸ್ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದು ಚಾಮರಾಜನಗರದ ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಡ್ರೋಣ್ ಕಣ್ಗಾವಲು ಇರಿಸಲಾಗುತ್ತದೆ. ಈಗಾಗಲೇ, ಪ್ರಮುಖ ಸ್ಥಳಗಳಲ್ಲಿ ಬಾಂಬ್ ಪತ್ತೆದಳ ಹಾಗೂ ಶ್ವಾನದಳ ತಪಾಸಣೆ ನಡೆಸಿದ್ದು ಬುಧವಾರ ಬೆಳಗ್ಗೆಯೂ ಮತ್ತೊಮ್ಮೆ ಕಾರ್ಯಾಚರಣೆ ನಡೆಸಲಿದೆ ಎಂದರು.
ಇನ್ನು, ಇಂದು ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಚಾಮರಾಜೇಶ್ವರ ದೇಗುಲ, ಭುವನೇಶ್ವರಿ ವೃತ್ತ, ಮಸೀದಿ ರಸ್ತೆ, ಗುಂಡ್ಲುಪೇಟೆ ವೃತ್ತ, ಮಸೀದಿಗಳಲ್ಲಿ ಬಾಂಬ್ ಪತ್ತೆ ನಡೆಸಿ ಕಟ್ಟೆಚ್ಚರ ವಹಿಸಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಗುಂಪುಗೂಡುತ್ತಿದ್ದ ಪುಂಡರಿಗೆ ಡ್ರೋಣಾಚಾರ್ಯ ಚಳಿ ಬಿಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.