ಚಾಮರಾಜನಗರ: 1995ರಲ್ಲಿ ಡಾ.ರಾಜ್ ಕುಮಾರ್ ಅವರಿಂದ ಉದ್ಘಾಟನೆಗೊಂಡಿದ್ದ ಶ್ರೀ ಗುರು ರಾಘವೇಂದ್ರ ಚಿತ್ರಮಂದಿರದಲ್ಲಿ ಪುನೀತ್ ರಾಜ್ಕುಮಾರ್ ಸ್ಮರಣೆ ಪ್ರಯುಕ್ತ ಅವರು ನಟಿಸಿದ್ದ ಸೂಪರ್ ಹಿಟ್ ಸಿನಿಮಾ ರಾಜಕುಮಾರ ಚಿತ್ರದ ಉಚಿತ ಪ್ರದರ್ಶನ ನಡೆಯುತ್ತಿದೆ.
ರಾಜ್ ಅವರ ಕಟ್ಟಾ ಅಭಿಮಾನಿಯಾಗಿರುವ ಚಿತ್ರಮಂದಿರದ ಮಾಲೀಕ ಮೋಹನ್ ರಾಜ್ ಅವರು ಅಪ್ಪು ಸ್ಮರಣಾರ್ಥವಾಗಿ ರಾಜಕುಮಾರ ಚಿತ್ರದ ನಾಲ್ಕು ಪ್ರದರ್ಶನಗಳನ್ನು ಉಚಿತವಾಗಿ ನಡೆಸುತ್ತಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಒಳಗೊಂಡಂತೆ ಪುನೀತ್ ಚಿತ್ರವನ್ನು ಮತ್ತೊಮ್ಮೆ ಕಣ್ತುಂಬಿಕೊಂಡರು. ಅಭಿಮಾನಿಗಳು ಅಪ್ಪು ಡ್ಯಾನ್ಸ್ ಮತ್ತು ಫೈಟ್ ದೃಶ್ಯಗಳು ಬಂದಾಗ ಅಪ್ಪು ಅಮರ ಎಂದು ಘೋಷಣೆ ಕೂಗಿ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.
ಅಪ್ಪು ಅವರ ನಿಧನ ಇಡೀ ಭಾರತೀಯ ಚಿತ್ರರಂಗಕ್ಕೆ ನಷ್ಟವಾಗಿದ್ದು ಅಭಿಮಾನಿಗಳು ಪುನೀತ್‌ರನ್ನು ಮತ್ತೊಮ್ಮೆ ಚಿತ್ರದ ಮೂಲಕ ಕಾಣಲೆಂದು ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ. ಈ ಚಿತ್ರಮಂದಿರವನ್ನು ಅಣ್ಣಾವ್ರು ಉದ್ಘಾಟಿಸಿದ್ದರು ಎಂದು ನೆನಪಿಸಿಕೊಂಡರು ಥಿಯೇಟರ್ ಮ್ಯಾನೇಜರ್ ಚಿನ್ನಸ್ವಾಮಿ.
ತಾನು 8 ನೇ ಕ್ಲಾಸಿನಿಂದಲೇ ಅಪ್ಪು ಅಭಿಮಾನಿಯಾಗಿದ್ದು ಅವರು ಇನ್ನಿಲ್ಲ ಎಂಬುದನ್ನು ಸಹಿಸಲಾಗುತ್ತಿಲ್ಲ, ನೋವಿನಿಂದಲೇ ಇಂದು ಚಿತ್ರ ಕಾಣಲು ಬಂದಿದ್ದೇನೆ ಎಂದು ಅಭಿಮಾನಿ ಬೇಸರ ವ್ಯಕ್ತಪಡಿಸಿದರು.