ಚಾಮರಾಜನಗರ: ಕಾಣೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸೇತುವೆ ಸಮೀಪ ನಡೆದಿದೆ. ಹನೂರು ತಾಲೂಕಿನ ಪಿ ಜಿ ಪಾಳ್ಯ ಗ್ರಾಮದಲ್ಲಿರುವ ಹೊಸ ಮಠದ ರಾಜಶೇಖರ ಸ್ವಾಮೀಜಿ (70) ಮೃತ ದುರ್ದೈವಿ. ಇಂದು ಕಾವೇರಿ ನದಿ ತೀರದಲ್ಲಿ ಅಪರಿಚಿತ ಮೃತದೇಹ ದೊರೆತಿದೆ ಎಂಬ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿಸಿದ ಬಳಿಕ ಸ್ವಾಮೀಜಿ ಮೃತಪಟ್ಟಿರುವುದು ಗೊತ್ತಾಗಿದೆ.
ಕೊಳ್ಳೇಗಾಲದ ಕಡೆ ಹೋಗಿ ಬರುತ್ತೇನೆಂದು ಹೋದವರು ಮಠಕ್ಕೆ ಹಿಂದಿರುಗಿರಲಿಲ್ಲ: ಸ್ವಾಮೀಜಿ ಸಹೋದರ ಪ್ರಕಾಶ್ ಎಂಬುವರು ದೂರು ಕೊಟ್ಟಿದ್ದು, ಅದರಲ್ಲಿ ಸ್ವಾಮೀಜಿ ಅನಾರೋಗ್ಯ ಪೀಡಿತರಾಗಿದ್ದರು ಹಾಗೂ ಹೊಟ್ಟೆನೋವಿನಿಂದಲೂ ಬಳಲುತ್ತಿದ್ದರು. ಜ.17 ರಂದು ಕೊಳ್ಳೇಗಾಲದ ಕಡೆ ಹೋಗಿ ಬರುತ್ತೇನೆಂದು ಹೋದವರು ಮಠಕ್ಕೆ ಹಿಂದಿರುಗಿರಲಿಲ್ಲ. ಎಲ್ಲ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ.
ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು: ಅಷ್ಟರಲ್ಲಿ ಕಾವೇರಿ ವೆಸ್ಲಿ ಸೇತುವೆಯ ಬಳಿ ಅವರ ಮೃತದೇಹ ಸಿಕ್ಕಿದೆ ಎಂದು ತಿಳಿಯಿತು. ಅನಾರೋಗ್ಯವಿದ್ದ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ನೀರಿನಲ್ಲಿ ಮುಳುಗಿರಬಹುದು ಎಂದು ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರಿಗೆ ಶವವನ್ನು ಒಪ್ಪಿಸಲಾಗಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ಗೃಹ ಸಚಿವರ ಎಚ್ಚರಿಕೆ
ದೇಗುಲ ಅತಿಕ್ರಮಣ ಖಂಡಿಸಿ ಪ್ರತಿಭಟನೆ: ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಶೀಗೆವಾಡಿ ಗ್ರಾಮದ ಹಿಂದೂ ದೇವಾಲಯ ಅತಿಕ್ರಮಣವಾಗಿ ಹೊಡೆದು ಹಾಕಲು ಮುಂದಾಗಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಬೇಗೂರು ಪೊಲೀಸ್ ಠಾಣೆ ಎದುರು ಇಂದು ಧರಣಿ ನಡೆಸಿದ್ದಾರೆ.
ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಶೀಗೆವಾಡಿ ಗ್ರಾಮದ ಗಣಪತಿ ಮತ್ತು ಚನ್ನಕೇಶವ ದೇವಾಲಯ ಪುರಾತನ ಕಾಲದಾಗಿದ್ದು, ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದರು. ಬೆಂಗಳೂರು ಮೂಲದ ಸುಜಾತ ಎಂಬುವರು ದೇವಾಲಯದ ಪಕ್ಕದಲ್ಲಿ ಜಮೀನನ್ನು ಖರೀದಿ ಮಾಡಿದ್ದು, ದೇವಾಲಯವನ್ನು ಸಹ ಒಡೆದುಹಾಕಲು ಮುಂದಾದಾಗ ಗ್ರಾಮಸ್ಥರು ತಡೆದು ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಆದರೆ, ಬೇಗೂರು ಪೊಲೀಸರು ಸೆಕ್ಷನ್ 107 ರ ಅಡಿ ಗ್ರಾಮಸ್ಥರ ವಿರುದ್ಧವೇ ದೂರು ದಾಖಲಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡು ಮೂಲದ ಲಾರಿಯೊಂದು ಕಾರಿಗೆ ಡಿಕ್ಕಿ : ಕಾರಿಗೆ ಲಾರಿಯೊಂದು ಡಿಕ್ಕಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರ ಸಮೀಪ ಶುಕ್ರವಾರ ಮಧ್ಯಾಹ್ನ ನಡೆದಿದೆ. ತಮಿಳುನಾಡು ಮೂಲದ ಲಾರಿಯೊಂದು ಅತಿವೇಗವಾಗಿ ಬಂದ ಪರಿಣಾಮ ನಿಯಂತ್ರಣ ತಪ್ಪಿ ಕಾರಿನ ಒಂದು ಬದಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ. ಎರಡೂ ವಾಹನಗಳು ಜಖಂಗೊಂಡಿದ್ದು, ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ಮನಸೆಳೆದ ಸಿರಿಧಾನ್ಯ ಮಾರಾಟ, ಬಹುವಿಧದ ಭಕ್ಷ್ಯ ಖಾದ್ಯದ ಮಳಿಗೆಗಳು..!